ಚಳ್ಳಕೆರೆ ನಗರದ ಆದರ್ಶವಿದ್ಯಾಲಯದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಿಎಸ್‌ಐ ಈರೇಶ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಪ್ರತಿನಿತ್ಯ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ವಹಿಸುವಂತೆ ಸಂಚಾರ ನಿಯಮಗಳ ಪಾಲನೆಗೆ ಆದ್ಯತೆ ನೀಡಬೇಕಲ್ಲದೆ, ಪೊಲೀಸ್ ಇಲಾಖೆಯ ಅಪರಾಧಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಪಿಎಸ್‌ಐ ಈರೇಶ್ ತಿಳಿಸಿದರು.ಮಂಗಳವಾರ ಆದರ್ಶ ವಿದ್ಯಾಲಯದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಾಗ ಮಾತ್ರ ನಾವು ಅಪಾಯದಿಂದ ಪಾರಾಗಬಹುದು. ಇತ್ತೀಚಿನ ದಿನಗಳಲ್ಲಿ ಈ ರಸ್ತೆಯಲ್ಲಿ ಅಪಘಾತಗಳು ಸರ್ವೆಸಾಮಾನ್ಯವಾಗಿದ್ದು ಪ್ರತಿಯೊಂದು ಹಂತದಲ್ಲೂ ನಿಯಮಗಳ ಉಲ್ಲಂಘನೆಯಿಂದ ಅಪಘಾತಗಳು ನಡೆಯುತ್ತಿರುವುದು ಕಂಡುಬಂದಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಸಂಬಂಧಪಟ್ಟ ಇಲಾಖೆಯಿಂದ ಡ್ರೈವಿಂಗ್ ಲೈಸನ್ಸ್ ಪಡೆದು ತಮ್ಮ ವಾಹನ ಚಲಾಯಿಸಬೇಕು. ಯಾವುದೇ ರೀತಿಯ ಸಮಾಜ ವಿರೋಧಿ ಚಟುವಟಿಕೆಗಳಿಗೆ ಸಹಕಾರ ನೀಡಬಾರದು. ಅಂತಹ ಯಾವುದೇ ಮಾಹಿತಿ ಇದ್ದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ತಿಳಿಸಿ ಎಂದು ಮನವಿ ಮಾಡಿದರು.ಪ್ರಭಾರ ಮುಖ್ಯ ಶಿಕ್ಷಕ ರುದ್ರಮುನಿ ಮಾತನಾಡಿ, ಶಾಲೆಯಲ್ಲಿ ಇಂದು ನಡೆದ ಈ ಕಾರ್ಯಕ್ರಮ ಎಲ್ಲಾ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ಮಾಡಿದಂತಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ನೆರವಾಗಬೇಕೆಂದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷ ಗಿರೀಶ್‌ಕುಮಾರ್, ಶಿಕ್ಷಕರಾದ ಟಿ.ಬೊಮ್ಮಲಿಂಗಪ್ಪ, ಮುಕ್ತಾಯಕ್ಕ, ಮಂಜುನಾಥ, ವೀರಭದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.