ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ತಂದೆ- ತಾಯಿಯನ್ನು ತಲೆ ಎತ್ತುವಂತೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ವಿದ್ಯಾರ್ಥಿಯದ್ದು, ಸಮಾಜದ ನಂಬಿಕೆಗೆ ದ್ರೋಹ ಬಗೆಯದಂತೆ ಬದುಕುವುದೇ ನಮಗೆ ನೀಡುವಂಥ ಮನ್ನಣೆ. ಆದ್ದರಿಂದ ವಿದ್ಯಾರ್ಥಿಗಳು ಚನ್ನಾಗಿ ಓದಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಿ ಎಂದು ತುಮಕೂರಿನ ರಾಮಕೃಷ್ಣಾಶ್ರಮದ ಶ್ರೀವಿರೇಶಾನಂದ ಸ್ವಾಮೀಜಿ ತಿಳಿಸಿದರು.ಪಟ್ಟಣದ ತೀನಂಶ್ರೀ ಭವನದಲ್ಲಿ ಶನಿವಾರ ಎಸ್.ಬಿ.ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ಸಿಇಟಿ/ ನೀಟ್/ ಜೆಇಇ ತರಬೇತಿ ಕಾರ್ಯಾಗಾರ ಹಾಗೂ ಎಸ್‌ಎಸ್‌ಎಲ್‌ಸಿ ಪ್ರೇರಣಾ ಶಿಬಿರದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳು ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಸಾಧನ ಪರಿಕರಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಚಿಕ್ಕನಾಯಕನಹಳ್ಳಿ ಪ್ರಾಕೃತಿಕವಾಗಿ ವಿಶಿಷ್ಟವಾಗಿದ್ದು, ಇಲ್ಲಿನ ಜನರು ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಶ್ರಮಿಕ ವರ್ಗದವರಾಗಿದ್ದು, ಇದು ತೀನಂಶ್ರೀಯವರು ಸೇರಿದಂತೆ ಅನೇಕ ಮಹಿನೀಯರು ಜನಿಸಿದ ಊರು, ಅದರಲ್ಲಿ ಇಲ್ಲಿನವರಾದ ಸಚಿವರಾಗಿದ್ದಾಗ ಸರಳತೆಯಿಂದ ಜನಾನುರಾಗಿಯಾಗಿದ್ದ ದಿ. ಎನ್.ಬಸವಯ್ಯನವರು ಉತ್ತಮ ವ್ಯಕ್ತಿಯಾಗಿದ್ದರು, ಅವರಂತೆ ಅವರ ಮಗ, ಶಾಸಕ ಸುರೇಶ್ ಬಾಬುರವರು ಜನಾನುರಾಗಿಯಾಗಿದ್ದಾರೆ. ಇವರಲ್ಲಿನ ಶಿಕ್ಷಣದ ಪ್ರೀತಿಯು ಇಲ್ಲಿನ ಮಕ್ಕಳಿಗೆ ವರವಾಗಿದೆ. ಆದ್ದರಿಂದ ಮಕ್ಕಳು ಇವರು ನೀಡುತ್ತಿರುವಂತಹ ಈ ಸೌಲಭ್ಯಗಳನ್ನು ಬಳಸಿಕೊಂಡು ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.
ಬಡತನವೆಂಬುದು ಶಾಪವಲ್ಲ, ಹಾಗೆಯೇ ಶ್ರೀಮಂತಿಕೆ ಎಂಬುದು ಕೂಡ ವರ ಅಲ್ಲ ಎಂದ ಅವರು, ಸರ್.ಎಂ. ವಿಶ್ವೇಶ್ವರಯ್ಯ, ಸರ್.ಸಿ.ವಿ.ರಾಮನ್, ಅಂಬೇಡ್ಕರ್, ಅಬ್ದುಲ್ ಕಲಾಂರವರಂತೆ ನೀವು ಸಹ ಸಾಧನೆ ಮಾಡಬೇಕು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ ಬಾಬು, ನನ್ನ ಕ್ಷೇತ್ರದಲ್ಲಿ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು, ನನ್ನ ಗುರಿಯೇ ಶಿಕ್ಷಣ ಹಾಗೂ ಆರೋಗ್ಯವಾಗಿದೆ. ಆದ್ದರಿಂದ ನಮ್ಮ ಗ್ರಾಮೀಣ ಭಾಗದ ಮಕ್ಕಳಿಗಾಗಿ ಕಳೆದ ೧೦ ವರ್ಷಗಳಿಂದ ಪರೀಕ್ಷೆ ವೇಳೆ ಸಿಇಟಿ ತರಬೇತಿ ನೀಡುತ್ತಿದ್ದು, ಈ ವರ್ಷದಿಂದ ವರ್ಷದ ಮೊದಲಿಂದಲೇ ಪ್ರತಿ ಭಾನುವಾರ ಉಚಿತವಾಗಿ ಸಿಇಟಿ ತರಬೇತಿ ನೀಡುತ್ತಿದ್ದೇವೆ. ಅದರಂತೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರದ ಮೂಲಕ ಹೆಚ್ಚು ಅಂಕಗಳನ್ನು ಗಳಿಸಲು ಅವಕಾಶ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಸಾಧನೆಗೈದು ನಿಮ್ಮ ಜೀವನ ರೂಪಿಸಿಕೊಳ್ಳಿ, ನಂತರ ನಿಮ್ಮ ತಂದೆ- ತಾಯಿ, ಗುರುಗಳನ್ನು ಮರೆಯದೇ ಅವರ ಸೇವೆ ಮಾಡಿ ಎಂದು ತಿಳಿಸಿದರು.
ತಹಸೀಲ್ದಾರ್ ಪುರಂದರ ಕೆ. ಮಾತನಾಡಿ, ಶಾಸಕರ ಕಾಳಜಿಯು ಈ ಭಾಗದ ಜನರ ಹಾಗೂ ವಿದ್ಯಾರ್ಥಿಗಳ ಮೇಲೆ ಅಪಾರವಾಗಿದ್ದು, ಜನರಿಗಾಗಿ ಪ್ರತಿ ಸೋಮವಾರ ಜನಸ್ಪಂದನಾ ಕಾರ್ಯಕ್ರಮ ಹಾಗೂ ಪ್ರತಿ ಶುಕ್ರವಾರ ಮನೆಬಾಗಿಲಿಗೆ ಮನೆಮಗ ಕಾರ್ಯಕ್ರಮಗಳು ಶಾಸಕರ ಜನೋಪಯೋಗಿ ಕಾರ್ಯಗಳಾಗಿವೆ. ಶಿಕ್ಷಣಕ್ಕಾಗಿ ತರಬೇತಿ ಶಿಬಿರಗಳು ಮಕ್ಕಳಿಗೆ ಅನುಕೂಲವಾಗಲಿದ್ದು, ಇಂತಹ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮವಾಗಿ ಅದ್ಯಯನ ಮಾಡಿ ಉನ್ನತ ಸ್ಥಾನಗಳಿಗೆ ಹೋದರೆ ಶಾಸಕರಿಗೂ, ಈ ಊರಿಗೂ ಗೌರವ ನೀಡಿದಂತೆ ಎಂದು ಸಲಹೆ ನೀಡಿದರು.ಇಒ ಡಾ.ದೊಡ್ಡಸಿದ್ದಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಸಿ.ಎಸ್., ಪಿಎಲ್‌ಡಿ ಬ್ಯಾಂಕ್‌ನ ನಿರ್ದೇಶಕ ರಾಮಚಂದ್ರಯ್ಯ, ಸಾ.ಚಿ.ನಾಗೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಣೆ ಮಾಡಲಾಯಿತು.
ಜಾನಪದ ಆಕಾಡೆಮಿ ಸದಸ್ಯ ಕೆಂಕೆರೆ ಮಲ್ಲಿಕಾರ್ಜುನ್, ಮುಖಂಡರಾದ ದಬ್ಬಗುಂಟೆ ರವಿಕುಮಾರ್, ಜಾನಮ್ಮ ರಾಮಚಂದ್ರಯ್ಯ, ತೀರ್ಥಪುರ ಕುಮಾರ್, ನಾಗರಾಜು, ಜಾಕೀರ್, ಸುರೇಶ್ ಮತ್ತಿತರರು ಇದ್ದರು.