ವಿದ್ಯಾರ್ಥಿಗಳು ಕಾನೂನನ್ನು ಗೌರವಿಸಬೇಕು: ನ್ಯಾ.ದಾಸರಿ ಕ್ರಾಂತಿ ಕಿರಣ್‌ ಕರೆ

| Published : Aug 12 2024, 01:13 AM IST

ಸಾರಾಂಶ

ನರಸಿಂಹರಾಜಪುರ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾನೂನು ಅರಿತು, ಗೌರವಿಸಬೇಕು ಎಂದು ಇಲ್ಲಿನ ಸಿವಿಲ್‌ ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್‌ ಕರೆ ನೀಡಿದರು.

ಮೊರಾರ್ಜಿ ವಸತಿ ಶಾಲೆಯಲ್ಲಿ ಮಾನವ ಸಾಗಾಣಿಕೆ ವಿರೋಧಿ ದಿನ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾನೂನು ಅರಿತು, ಗೌರವಿಸಬೇಕು ಎಂದು ಇಲ್ಲಿನ ಸಿವಿಲ್‌ ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್‌ ಕರೆ ನೀಡಿದರು.

ಅಳಲಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಕೀಲರ ಸಂಘ, ತಾಲೂಕು ಕಾನೂನು ಸೇವಾ ಸಮಿತಿ, ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಮಾನವ ಸಾಗಾಣಿಕೆ ವಿರೋಧಿ ದಿನಾಚರಣೆ ಹಾಗೂ ಶುಚಿ ಸ್ಯಾನಿಟರಿ ನ್ಯಾಪ್ ಕಿನ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಮಕ್ಕಳಿಗೆ ತಾಯಿಯ ಭ್ರೂಣದಿಂದಲೇ ಕಾನೂನಿನ ರಕ್ಷಣೆ ಪ್ರಾರಂಭವಾಗಿ ಕೊನೆ ತನಕ ರಕ್ಷಿಸುತ್ತದೆ.ಯಾವುದೇ ಸಮಸ್ಯೆ ಆದರೂ ತಾಲೂಕು ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಿ ಉಪಯುಕ್ತ ಮಾಹಿತಿ ಪಡೆಯಬಹುದು ಎಂದರು.

ಹದಿ ಹರೆಯದ ವಿದ್ಯಾರ್ಥಿನಿಯರು ಆರೋಗ್ಯ ಹಾಗೂ ನೈರ್ಮಲ್ಯ ಬಗ್ಗೆ ತಿಳಿದುಕೊಂಡು ನಿಮ್ಮ ಆರೋಗ್ಯ ಕಾಪಾಡಿ ಕೊಳ್ಳಬೇಕು. ಸರ್ಕಾರದಿಂದ ನೀಡುವ ಉಚಿತ ಶುಚಿ ಸ್ಯಾನಿಟರಿ ನ್ಯಾಪ್‌ ಕಿನ್‌ ಬಳಿಸಿ ನೈರ್ಮಲ್ಯತೆಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಆರ್‌ಬಿಎಸ್‌ಕೆ ವೈದ್ಯರಾದ ಡಾ. ಆಸ್ನಾ ಮಾತನಾಡಿ, ಹದಿಹರೆಯ ಎಂಬುದು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದೆ. ಈ ಹಂತದಲ್ಲಿ ಮಾನಸಿಕ ಹಾಗೂ ದೈಹಿಕ ಬದಲಾವಣೆಗಳಾಗುತ್ತವೆ. ಈ ಬದಲಾವಣೆ ಅರಿತು ಯಾವುದೇ ಸಮಸ್ಯೆ ಎದುರಾದರೂ ಪೋಷಕರು, ವೈದ್ಯರಿಂದ ಸೂಕ್ತವಾದ ಸಲಹೆ ಪಡೆದುಕೊಳ್ಳಬೇಕು. ಪೌಷ್ಠಿಕ ಆಹಾರ ಸೇವನೆ ಮಾಡಬೇಕು. ಹದಿಹರೆಯದ ಹೆಣ್ಣು ಮಕ್ಕಳು ಪ್ರಕೃತಿದತ್ತವಾಗಿ ನಡೆಯುವ ಸಹಜ ಪ್ರಕ್ರಿಯೆ ಸಂದರ್ಭದಲ್ಲಿ ನೈರ್ಮಲ್ಯತೆಗೆ ಆದ್ಯತೆ ನೀಡಿ ಇಂದು ಆರೋಗ್ಯ ಇಲಾಖೆಯಿಂದ ವಿತರಿಸುತ್ತಿರುವ ಶುಚಿ ಸ್ಯಾನಟರಿ ನ್ಯಾಪ್ ಕಿನ್‌ ಸೂಕ್ತವಾಗಿ ಬಳಸುವಂತೆ ಸಲಹೆ ನೀಡಿದರು.

ವಕೀಲ ಎಚ್‌.ಎ. ಸಾಜು ಮಾನವ ಕಳ್ಳ ಸಾಗಾಣಿಕೆ ಕುರಿತು ಉಪನ್ಯಾಸ ನೀಡಿದರು. ಸಭೆ ಅಧ್ಯಕ್ಷತೆಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲೆ ಪೂರ್ಣಿಮ ವಹಿಸಿದ್ದರು. ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಎಸ್‌.ಎಸ್‌. ಸಂತೋಷಕುಮಾರ್‌, ಡಾ.ಶ್ವೇತ, ಅನಿತಾ, ಆಪ್ತ ಸಮಾಲೋಚಕ ಸಹಾಸ್‌, ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಇದ್ದರು. ಇದೇ ಸಂದರ್ಭದಲ್ಲಿ ಹದಿ ಹರೆಯದ ಹೆಣ್ಣ ಮಕ್ಕಳಿಗೆ ಶುಚಿ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸಲಾಯಿತು.