ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿ ಅವರನ್ನು ಸೃಜನಶೀಲರನ್ನಾಗಿ ಹೊರಹೊಮ್ಮಿಸಬೇಕು. ಅವರ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಕರು, ಪಾಲಕರು ನಿರಂತರ ಶ್ರಮಿಸಬೇಕು.

ನರಗುಂದ: ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪಠ್ಯದ ಜತೆಗೆ ಸೃಜನಶೀಲ ಸಾಂಸ್ಕೃತಿಕ ಚಟುವಟಿಕೆಗಳು ಅಗತ್ಯವಿದೆ. ಶಿಕ್ಷಕರು ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕೆಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.

ಪಟ್ಟಣದ ರೋಟರ್ಯಾಕ್ಟ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಎಲ್ಲ ರೀತಿಯ ಮೂಲ ಸೌಲಭ್ಯಗಳು ಸರ್ಕಾರ ನೀಡಿದೆ. ಇಲ್ಲಿನ ಸರ್ಕಾರಿ ಶಾಲೆಗಳ ಮಕ್ಕಳು ಉನ್ನತ ಹುದ್ದೆಗೆ ಏರಬೇಕು ಎಂದರು.

ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿ ಅವರನ್ನು ಸೃಜನಶೀಲರನ್ನಾಗಿ ಹೊರಹೊಮ್ಮಿಸಬೇಕು. ಅವರ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಕರು, ಪಾಲಕರು ನಿರಂತರ ಶ್ರಮಿಸಬೇಕು. ಮಕ್ಕಳಿಗೆ ಸ್ಪರ್ಧಾತ್ಮಕ ಜಗತ್ತಿನ ಪರಿಚಯವಾಗಬೇಕು. ಅವರ ವಿಶೇಷ ಪ್ರತಿಭೆ ಅವರ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗಬೇಕು ಎಂದರು.ರೋಟರ್ಯಾಕ್ಟ್ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಸುರೇಶ ಬೋನಗೇರಿ ಮಾತನಾಡಿ, ಮಕ್ಕಳಿಗೆ ನಿರಂತರ ಮಾರ್ಗದರ್ಶನ ನೀಡಿದಾಗ ಉತ್ತಮ ಪ್ರತಿಭೆಯಾಗಿ ರೂಪುಗೊಳ್ಳಲು ಸಾಧ್ಯವೆಂದರು.

ಸಮಾರಂಭದಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ಪಿ.ಆರ್. ಆನೇಗುಂದಿ, ಸಿ.ಜಿ. ಕೋರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಕಂಬಳಿ, ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಎನ್.ಆರ್. ನಿಡಗುಂದಿ, ಅಕ್ಷರ ದಾಸೋಹದ ಅಧಿಕಾರಿ ಎಂ.ಇರ್. ಅಸುಂಡಿ, ಶಿಕ್ಷಕರ ಸಂಘದ ಎಸ್.ಎಲ್. ಮರಿಗೌಡ್ರ, ಝೆಡ್.ಎಂ. ಖಾಜಿ, ಬಿಆರ್‌ಪಿಗಳಾದ ರಾಯನಗೌಡ್ರ, ದೊಡ್ಡಲಿಂಗಪ್ಪನವರ, ಮುಖ್ಯಶಿಕ್ಷಕ ಎಫ್.ವಿ. ಶಿರುಂದಮಠ, ಸಂಯೋಜಕ ಬಿ.ಎಸ್. ಕಬಾಡ್ರ ಹಾಗೂ ಸಿಆರ್‌ಪಿಗಳು, ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಪಿ.ವಿ. ಕೆಂಚನಗೌಡ್ರ ನಿರೂಪಿಸಿ, ವಂದಿಸಿದರು.