ಸಾರಾಂಶ
ಚನ್ನಪಟ್ಟಣ: ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಮಾತನಾಡುವ ಕೌಶಲ್ಯ, ಪ್ರಜಾಪ್ರಭುತ್ವದ ಪ್ರಕ್ರಿಯೆಗಳ ಅರಿವು ಮೂಡಿಸುವಲ್ಲಿ ಅಣುಕು ವಿಧಾನಸಭಾ ಅಧಿವೇಶನ ಸಹಕಾರಿ ಎಂದು ಬಾಲು ಪಬ್ಲಿಕ್ ಶಾಲೆಯ ಜಂಟಿ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯಂ ಹೇಳಿದರು.
ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಅಣುಕು ವಿಧಾನಸಭಾ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಆಶಯ, ನೀತಿ ನಿರೂಪಣೆಯಲ್ಲಿ ಶಾಸಕಾಂಗದ ಪಾತ್ರ, ಶಾಸಕಾಂಗ ನಡೆಯುವ ಪ್ರಕ್ರಿಯೆಗಳ ಕುರಿತು ವಿದ್ಯಾರ್ಥಿ ದೆಸೆಯಲ್ಲಿಯೇ ಅರಿವು ಮೂಡಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಶಾಲೆಯಲ್ಲಿ ಪ್ರತಿವರ್ಷ ವಿಧಾನಸಭಾ ಅಧಿವೇಶನದ ಅಣುಕು ಪ್ರದರ್ಶನ ಹಾಗೂ ಅಣುಕು ಸಂಸತ್ ಅಧಿವೇಶನವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಇದರಿಂದ ನಮ್ಮ ಶಾಸಕಾಂಗ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ವಿದ್ಯಾರ್ಥಿಗಳಿಗೆ ಅರಿವಾಗುತ್ತದೆ ಎಂದರು.ಯಾವುದೇ ಪ್ರಮುಖ ಕಾನೂನು, ಯೋಜನೆಗಳ ಜಾರಿಗೆ ಮುನ್ನ ಶಾಸನ ಸಭೆಯಲ್ಲಿ ಅದನ್ನು ಮಂಡಿಸಲಾಗುತ್ತದೆ. ಈ ಕುರಿತು ವಿಸ್ತೃತ ಚರ್ಚೆ ನಡೆದ ನಂತರ ಅಂಗೀಕರಿಸಲಾಗುತ್ತದೆ. ಅಣುಕು ಅಧಿವೇಶನದಲ್ಲಿ ಸಂಕೀರ್ಣ ಸಾಮಾಜಿಕ ಸಮಸ್ಯೆಗಳು, ನೀತಿ ನಿರೂಪಣೆಯಲ್ಲಿ ಅಡಕವಾಗಿರುವ ಒಳನೋಟಗಳ ಅರಿವು ಮೂಡಿಸುವ ಜತೆಗೆ ವಿದ್ಯಾರ್ಥಿಗಳಲ್ಲಿರುವ ನಾಯಕತ್ವ ಗುಣ ಹೊರತರಲು ವೇದಿಕೆಯಾಗಿದ್ದು ಸದ್ಬಳಸಿಕೊಳ್ಳಬೇಕು. ವಿದ್ಯಾರ್ಥಿ ಹಂತದಲ್ಲೇ ನಾಯಕತ್ವ ಗುಣ ಬೆಳೆಸಿಕೊಂಡಲ್ಲಿ, ನಿಮ್ಮ ಮುಂದಿನ ಭವಿಷ್ಯ ಉಜ್ವಲಗೊಳ್ಳುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯೆಯ ಜತೆಗೆ ಸಾಮಾಜಿಕ ಚಿಂತೆಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ಶಾಲೆ ಇಂತಹ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ಈ ವೇಳೆ ಮುಖ್ಯಶಿಕ್ಷಕಿ ಕವಿತಾ, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.ಬಾಕ್ಸ್
ಗಮನ ಸೆಳೆದ ಅಣುಕು ಅಧಿವೇಶನಅಣುಕು ವಿಧಾನಸಭೆ ಅಧಿವೇಶನದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಅಧಿವೇಶನದ ಮಾದರಿಯಲ್ಲಿ ಸ್ಪೀಕರ್ ಪೀಠ, ಆಡಳಿತ ಪಕ್ಷ, ವಿರೋಧ ಪಕ್ಷಗಳ ಆಸನಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಸ್ಪೀಕರ್, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ಪಾತ್ರಗಳನ್ನು ವಿದ್ಯಾರ್ಥಿಗಳು ನಿಭಾಯಿಸಿದರು. ಸರ್ಕಾರ ಜಾರಿಗೆ ತಂದಿರುವ ಉಚಿತ ಕಲ್ಯಾಣ ಯೋಜನೆಗಳ ಲಾಭ-ದೋಷಗಳು, ಸರ್ಕಾರಿ ಸಂಪಲ್ಮೂನಗಳ ಅವಲಂಬನೆ, ಹಣಕಾಸು ಪರಿಸ್ಥಿತಿಯ ಮೇಲೆ ಉಂಟಾಗುವ ಪರಿಣಾಮ, ಉಚಿತ ಯೋಜನೆಗಳಿಂದ ಜನರ ಮೇಲೆ ಆಗುವ ಅಲ್ಪಕಾಲಿಕ ಹಾಗೂ ದೀರ್ಘಕಾಲಿಕ ಪರಿಣಾಮ ಇತ್ಯಾದಿ ವಿಷಯಗಳು ಅಧಿವೇಶನದ ಉದ್ದಕ್ಕೂ ವಿದ್ಯಾರ್ಥಿಗಳು ತಮ್ಮ ಚಿಂತನೆಗಳನ್ನು ಪ್ರಸ್ತುತಪಡಿಸಿದರು.
ಪೊಟೋ೧೭ಸಿಪಿಟಿ೨:ಚನ್ನಪಟ್ಟಣದ ಬಾಲು ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಅಣುಕು ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು.