ಬಸವಣ್ಣನವರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳುವುದು ಸೂಕ್ತ: ಸಚಿವ ಪಾಟೀಲ

| Published : Feb 18 2024, 01:38 AM IST

ಬಸವಣ್ಣನವರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳುವುದು ಸೂಕ್ತ: ಸಚಿವ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಜಗಜ್ಯೋತಿ ಬಸವಣ್ಣನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿ ಹೆಜ್ಜೆ ಹಾಕುವುದು ಸೂಕ್ತವಾಗಿದೆ. ಮಹಾ ಮಾನವತಾವಾದಿ ವಿಶ್ವ ಗುರು, ಸಮ ಸಮಾಜ ಕಟ್ಟುವುದರಲ್ಲಿ ಯಶಸ್ವಿಯಾದವರು ಹಾಗೂ ಮೊಟ್ಟ ಮೊದಲನೇ ಸಂಸದೀಯ ವ್ಯವಸ್ಥೆ ಹುಟ್ಟುಹಾಕಿದವರೇ ಪೂಜ್ಯ ಬಸವಣ್ಣನವರು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ಗದಗ: ಜಗಜ್ಯೋತಿ ಬಸವಣ್ಣನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿ ಹೆಜ್ಜೆ ಹಾಕುವುದು ಸೂಕ್ತವಾಗಿದೆ. ಮಹಾ ಮಾನವತಾವಾದಿ ವಿಶ್ವ ಗುರು, ಸಮ ಸಮಾಜ ಕಟ್ಟುವುದರಲ್ಲಿ ಯಶಸ್ವಿಯಾದವರು ಹಾಗೂ ಮೊಟ್ಟ ಮೊದಲನೇ ಸಂಸದೀಯ ವ್ಯವಸ್ಥೆ ಹುಟ್ಟುಹಾಕಿದವರೇ ಪೂಜ್ಯ ಬಸವಣ್ಣನವರು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ ಶನಿವಾರ ಕರ್ನಾಟಕ ಸಾಂಸ್ಕೃತಿಕ ನಾಯಕರಾದ ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಹಾಗೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಆನಂತರ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಇತ್ತೀಚೆಗೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಗುರುತಿಸಿ ಗೌರವಿಸಿ ಅಧಿಕೃತಗೊಳಿಸಿದೆ. ಬಸವಣ್ಣನವರು ರಾಜ್ಯದ ಸಾಂಸ್ಕೃತಿಕ ನಾಯಕರಾಗಿರುವುದು ನಮ್ಮ ಹೆಮ್ಮೆ ಎಂದರು.

ಮಹಾತ್ಮಾ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ವಿಶ್ವ ಗುರು ಬಸವಣ್ಣ ಅವರುಗಳ ಭಾವಚಿತ್ರಗಳನ್ನು ಕಚೇರಿಯಲ್ಲಿ ಅಳವಡಿಸಲಾಗುತ್ತಿದೆ. ಅದರಂತೆ ಸಂವಿಧಾನ ಪೀಠಿಕೆಯನ್ನೂ ಸಹ ಅಳವಡಿಸಲಾಗುತ್ತಿದೆ. ಇದರರ್ಥ ಅಂತಹ ಮಹಾನ್ ಪುರುಷರ ಜೀವನ ಸಂದೇಶ ಮೌಲ್ಯಗಳನ್ನು ಸರ್ಕಾರಿ ನೌಕರರು ಹಾಗೂ ಜನ ಸಾಮಾನ್ಯರು ಅರಿತು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಲು ಪ್ರೇರಣೆಯಾಗಲಿ ಎಂಬ ಸದುದ್ದೇಶವನ್ನು ಸರ್ಕಾರ ಹೊಂದಿದೆ. ಬಸವಣ್ಣನವರ ಭಾವಚಿತ್ರಗಳನ್ನು ಎಲ್ಲ ಜಿಲ್ಲಾ, ತಾಲೂಕು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಹಾಕುವುದರಿಂದ ಪ್ರತಿಯೊಬ್ಬರೂ ತಮ್ಮ ವ್ಯಕ್ತಿತ್ವ ಸರಿಪಡಿಸಲು ಪ್ರೇರಣೆ ನೀಡಿದಂತಾಗುತ್ತದೆ ಎಂದರು.

ಬಸವಣ್ಣನವರು ಸಮಾಜದಲ್ಲಿ ಓರೆ ಕೋರೆಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಅವರ ಸಂದೇಶಗಳಲ್ಲಿನ ಭಕ್ತಿ, ಭಯಗಳ ಮುಖಾಂತರ ನಾವು ನಮ್ಮ ನಡುವಳಿಕೆ, ನಿಲುವನ್ನು ಸುಧಾರಿಸಿಕೊಳ್ಳಲು ಬದಲಾವಣೆ ತಂದುಕೊಳ್ಳಬೇಕು. ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣನವರನ್ನು ಹೊಗಳುವುದಕ್ಕಿಂತ ಅವರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಪರಿಪಾಲಿಸಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರನ್ನು ಗೌರವದಿಂದ ಕಾಣಬೇಕು. ಆಡಳಿತದಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.

೧೨ನೇ ಶತಮಾನದಲ್ಲಿಯೇ ಬಸವಣ್ಣನವರು ಮಹಿಳಾ ಸಬಲೀಕರಣ ಹಾಗೂ ಸಮಾನತೆಗಾಗಿ ಹೋರಾಟ ನಡೆಸಿದವರಾಗಿದ್ದಾರೆ. ಪ್ರಜಾಪ್ರಭುತ್ವಕ್ಕೆ ಬಸವಣ್ಣನವರು ಬದ್ರ ಬುನಾದಿ ಹಾಕಿದವರು. ಸರ್ಕಾರದ ಐದೂ ಗ್ಯಾರಂಟಿ ಯೋಜನೆಗಳು ಕಾಯಕ ದಾಸೋಹದ ಅರ್ಥ ವ್ಯವಸ್ಥೆಯಲ್ಲಿ ಎಲ್ಲರ ಮನಸ್ಸನ್ನು ಜಾಗ್ರತಗೊಳಿಸುತ್ತವೆ. ಪ್ರತಿಯೊಬ್ಬರೂ ಬಸವಣ್ಣನವರ ವಿಚಾರಗಳಿಗೆ ಕೈಜೋಡಿಸುವ ಮೂಲಕ ಸಮಾಜ ಸುಧಾರಣೆಗೆ ಮುಂದಾಗಬೇಕೆಂದು ತಿಳಿಸಿದರು.

ಈ ವೇಳೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ., ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ, ಗಣ್ಯರಾದ ಜಿ.ಎಸ್. ಗಡ್ಡದೇವರಮಠ, ಸಿದ್ದು ಪಾಟೀಲ, ಪ್ರೊ. ಕೆ.ಎಚ್. ಬೇಲೂರ, ಎಸ್.ಎನ್. ಬಳ್ಳಾರಿ, ಬಸವರಾಜ ಕಡೆಮನಿ, ಪ್ರಭು ಬುರಬುರೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಂಘ ಸಂಸ್ಥೆಯವರು ಇದ್ದರು.

ಬಾಹುಬಲಿ ಜೈನರ ಕಾರ್ಯಕ್ರಮ ನಿರ್ವಹಿಸಿದರು. ಡಾ. ವೆಂಕಟೇಶ ಅಲ್ಕೋಡ ನಾಡಗೀತೆ ಪ್ರಸ್ತುತಪಡಿಸಿದರು.