ಅಯೋಧ್ಯೆ: ಪೇಜಾವರ ಶ್ರೀಗಳಿಂದ ಭೀಷ್ಮಾಷ್ಟಮಿ ಆಚರಣೆ

| Published : Feb 18 2024, 01:38 AM IST

ಸಾರಾಂಶ

ಮುಂಜಾನೆ ಪಟ್ಟದ ದೇವರ ಪೂಜೆಯ ಬಳಿಕ ಭೀಷ್ಮನಿಗೆ ಅರ್ಘ್ಯ ಸಮರ್ಪಿಸಿದರು. ಬಳಿಕ ಗಾಂಗೇಯ ಭೀಷ್ಮನ ಸ್ಮರಣಾರ್ಥ ರಜತ ಕುಂಭದಲ್ಲಿ ಪವಿತ್ರ ಗಂಗೋದಕವನ್ನು ತುಂಬಿಸಿ ಗಂಗಾಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಭೀಷ್ಮಾಷ್ಟಮಿಯನ್ನು ಶನಿವಾರ ಅಯೋಧ್ಯೆಯಲ್ಲಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ವಿಶಿಷ್ಟವಾಗಿ ಆಚರಿಸಿದರು.ಮುಂಜಾನೆ ಪಟ್ಟದ ದೇವರ ಪೂಜೆಯ ಬಳಿಕ ಭೀಷ್ಮನಿಗೆ ಅರ್ಘ್ಯ ಸಮರ್ಪಿಸಿದರು. ಬಳಿಕ ಗಾಂಗೇಯ ಭೀಷ್ಮನ ಸ್ಮರಣಾರ್ಥ ರಜತ ಕುಂಭದಲ್ಲಿ ಪವಿತ್ರ ಗಂಗೋದಕವನ್ನು ತುಂಬಿಸಿ ಗಂಗಾಪೂಜೆ ನೆರವೇರಿಸಿದರು.ಮಠದ ಶಿಷ್ಯರು, ಭಕ್ತರು ವಿಷ್ಣುಸಹಸ್ರನಾಮ‌ ಪಾರಾಯಣದೊಂದಿಗೆ ಶ್ರೀಗಳು ಮೆರವಣಿಗೆಯಲ್ಲಿ ಗಂಗೆಯನ್ನು ಅಯೋಧ್ಯೆ ರಾಮಮಂದಿರದ ಯಾಗಶಾಲೆಗೆ ಹೊತ್ತು ತಂದರು. ಅಲ್ಲಿ ವೈದಿಕರಿಂದ ವಿವಿಧ ಹೋಮಹವನಗಳು ಹಾಗೂ ಶ್ರೀಗಳು ಕಲಶಾರಾಧನೆ, ಕಲಶಪೂಜೆಗಳನ್ನು ನೆರವೇರಿಸಿ, ಶ್ರೀಬಾಲರಾಮನಿಗೆ ಗಾಂಗೇಯ ಭೀಷ್ಮಾಚಾರ್ಯರ ಪ್ರೀತ್ಯರ್ಥವಾಗಿ ಗಂಗಾಭಿಷೇಕ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.

-----------

ಅಯೋಧ್ಯೆಗೆ ಹೇಮಮಾಲಿನಿ ಭೇಟಿ

ಉಡುಪಿ: ಅಯೋಧ್ಯೆಯಲ್ಲಿ ಶನಿವಾರ ನೃತ್ಯ ಕಾರ್ಯಕ್ರಮ ನೀಡಿದ ಪ್ರಸಿದ್ಧ ನಟಿ, ನೃತ್ಯ ವಿದುಷಿ ಹೇಮಮಾಲಿನಿ ರಾಮಮಂದಿರಕ್ಕೆ ಭೇಟಿ ನೀಡಿ, ರಾಮನ ಉತ್ಸವ ಸೇವೆಯಲ್ಲಿದ್ದ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಹಿಂದೆ ಉಡುಪಿಯಲ್ಲಿ ನೃತ್ಯ ಕಾರ್ಯಕ್ರಮವನ್ನು ನೀಡಿದ್ದನ್ನು ಸ್ಮರಿಸಿಕೊಂಡರು.

-----------

ದೊಡ್ಡಣ್ಣಗುಡ್ಡೆ ಕ್ಷೇತ್ರದಲ್ಲಿ ಮಹಾಕಾಳಿ ಸಹಸ್ರ ಕದಳಿಯಾಗ ಸಂಪನ್ನ

ಉಡುಪಿ: ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಮಹಾಕಾಳಿ ಸಹಸ್ರ ಕದಳಿ ಯಾಗ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವಿಪ್ರಮೋತ್ತಮರ ನೇತೃತ್ವದಲ್ಲಿ ನೆರವೇರಿತು.

ದೇವಿ ಪ್ರೀತ್ಯಾರ್ಥ ನೆರವೇರಿದ ಈ ಮಹಾನ್ ಯಾಗದಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಕದಳಿಹಣ್ಣನ್ನು ತ್ರಿಮದುರಯುಕ್ತವಾಗಿ ಕಾಳಿಯ ‘ಕ’ಕಾರ ಸಹಸ್ರನಾಮದಲ್ಲಿ ಹೋಮಿಸಿ, ಕಾಳಿ ಅಷ್ಟೋತ್ತರ ನಾಮದಲ್ಲಿ ಅರ್ಚಿಸಿ ಯಾಗ ನೆರವೇರಿಸಲಾಯಿತು.

ಯಾಗದ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಆರಾಧನೆ ಕನ್ನಿಕರಾದನೆ ಮಹಾ ಅನ್ನಸಂತರ್ಪಣೆ ನೆರವೇರಿತು. ಬಹು ಅಪರೂಪವಾದ ಈ ಯಾಗದಲ್ಲಿ ಕ್ಷೇತ್ರದ ಸಹಸ್ರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.