ಸಾರಾಂಶ
ಹನುಮಸಾಗರ: ಎಲ್ಲ ಧರ್ಮಗಳನ್ನು ಹೂತು ಹಾಕಿದ ಕಲ್ಲಿನ ಗೋರಿಯ ಮೇಲೆ ಮನುಷ್ಯತ್ವದ ಮಗುವೊಂದು ಆಟವಾಡುವ ದಿನವೊಂದು ಬರಲಿದೆ. ಧರ್ಮದ ವ್ಯಾಪಾರಿಗಳಿಗೆ ಗಿರಾಕಿಗಳೇ ಇಲ್ಲದಂತಹ ಜಗತ್ತೊಂದು ಹುಟ್ಟಿ ಇಂತಹ ಮನುಷ್ಯತ್ವದ ಮಾನವೀಯ ಧರ್ಮದ ಶಿಕ್ಷಣವನ್ನು ನೀಡಬೇಕಾದ ಅನಿವಾರ್ಯತೆ ಹೆಚ್ಚಿದೆ ಎಂದು ಸಂಪನ್ಮೂಲ ವ್ಯಕ್ತಿ ಎಸ್.ಎಸ್. ತೆಮಿನಾಳ ಹೇಳಿದರು.ಸಮೀಪದ ಮಡಿಕೇರಿ ಗ್ರಾಮದ ಶಾಲೆಯ ವಾರ್ಷಿಕೋತ್ಸವ ಹಾಗೂ ಸ್ನೇಹ ಸಮ್ಮೇಳನ ಮತ್ತು ಗ್ರಾಮದ ನೌಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ದೇಶಕ್ಕೆ ಸೈನಿಕರನ್ನು ಕೊಟ್ಟಂತಹ ಗ್ರಾಮ ಮಡಿಕೇರಿ. ರಕ್ಷಣೆಗೆ ನಿಂತಂತಹ ಸೈನಿಕರ ಪರವಾಗಿ ಅವರ ಪೂಜ್ಯ ತಂದೆಯವರನ್ನು ಸನ್ಮಾನಿಸಿದ್ದು ಕೂಡ ಒಂದು ಇತಿಹಾಸ ಎಂದರು.ಮಕ್ಕಳಿಗೆ ಶಿಕ್ಷಣ ಕೊಡುವುದು ತುಂಬ ಅವಶ್ಯಕತೆಯಿದೆ. ಅದರೊಂದಿಗೆ ಅಂಕಗಳು ಮತ್ತು ಶ್ರೇಣಿಗಳ ಹಿಂದೆ ಮಕ್ಕಳನ್ನು ಓಡಿಸದಂತೆ ಅವರ ನೈತಿಕತೆ ಮತ್ತು ಮಾನವೀಯ ಮೌಲ್ಯಗಳ ಹಿಂದೆ ಬದುಕಲು ಪ್ರಾರಂಭಿಸುವುದು ತುಂಬ ಅನಿವಾರ್ಯವಾಗಿದೆ ಎಂದರು.ಬಾಲಾಪರಾಧ ಸಂಖ್ಯೆಗಳನ್ನು ನೋಡಿದರೆ ಎಲ್ಲ ಮಕ್ಕಳಿಗೆ ನಾವು ಕೊಡುತ್ತಿರುವ ಶಿಕ್ಷಣವು ಕೂಡ ವ್ಯತ್ಯಾಸವಾಗುವುದು ಕಂಡುಬರುತ್ತಿದೆ. ಗ್ರಂಥಗಳ ಮಾರ್ಮಿಕ ಸತ್ಯಾಂಶದ ತಿರುಳನ್ನು ತಿಳಿಸುವುದರ ಜೊತೆಗೆ ಕರ್ಣನ ಘೋರ ಜೀವನದ ಬಗ್ಗೆಯೂ ಮಕ್ಕಳಿಗೆ ತಿಳಿಸಿ ಕೊಡಬೇಕಾದ ಅನಿವಾರ್ಯತೆ ಇದೆ. ವಿದ್ಯೆ ಕೊಡಬೇಕಾದ ಗುರುಗಳು ಶಾಪ ಕೊಟ್ಟರು. ಹಾಲುಣಿಸುವ ತಾಯಿ ನೀರುಪಾಲು ಮಾಡಿದಳು. ಒಡಹುಟ್ಟಿದವರೇ ಹೆಡೆಮುರಿ ಕಟ್ಟಲು ಮುಂದಾದರು. ವರ ಕೊಡುವ ಇಂದ್ರನೇ ದಾನ ಕೇಳಿದ, ಆಶ್ರಯ ರಥ ಕುಸಿದು ಬೀಳುವಂತಾಯಿತು. ಎದೆಗುಂದದೇ ಕೊನೆಯ ಕ್ಷಣದವರೆಗೂ ಹೋರಾಟ ಮಾಡಿದ ಕರ್ಣನ ಶೌರ್ಯ, ಸಾಹಸ ಹಾಗೂ ಧರ್ಮದ ಬಗ್ಗೆ ಇರುವ ಬದ್ಧತೆಯ ಶಿಕ್ಷಣವನ್ನು ಇಂದು ಮಕ್ಕಳಿಗೆ ಕೊಡಬೇಕಾಗಿದೆ ಎಂದರು.