ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುದೇಶದ ಮಾನವ ಶಕ್ತಿ ಸಂಪೂರ್ಣವಾಗಿ ಬಳಕೆಯಾಗಲು ಮಕ್ಕಳಿಗೆ ಪಠ್ಯ ಶಿಕ್ಷಣದ ಜೊತೆಗೆ ನೈತಿಕತೆ, ಮನುಷ್ಯತ್ವ, ಅಧ್ಯಾತ್ಮದ ಶಿಕ್ಷಣ ಒದಗಿಸಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಮಂಗಳೂರಿನ ರಾಮಕೃಷ್ಣ ಮಠದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿವೇಕಾನಂದರ ಚಿಂತನೆಗಳು ಸಾಮಾಜಕ್ಕೆ ದಾರಿದೀಪವಾಗಿವೆ. ವಿಶ್ವದಾದ್ಯಂತ ಸುತ್ತಾಡಿ ಅಗಾಧ ಜ್ಞಾನ ಸಂಪಾದಿಸಿದ್ದ ಅವರು ಹಿಂದೂ ಧರ್ಮಕ್ಕೆ ಹೊಸ ಚೈತನ್ಯ ತುಂಬಿದವರು. ಮೂಢನಂಬಿಕೆಗಳು, ಅನಿಷ್ಠ ಪದ್ಧತಿಗಳಿಂದ ವ್ಯಥೆಪಟ್ಟಿದ್ದ ಅವರು ಸುಧಾರಣೆಗೆ ಶ್ರಮಿಸಿದವರು ಎಂದರು.ವಿವೇಕಾನಂದ ಜೀವನಗಾಥೆ ಅನೇಕ ಸದ್ವಿಚಾರಗಳನ್ನು ತಿಳಿಸಿಕೊಡುತ್ತದೆ. ಯಾವುದೇ ಧರ್ಮವಾಗಲಿ, ವ್ಯಕ್ತಿಯಾಗಲಿ ಹೇಳುವ ಸದ್ವಿಚಾರಗಳು ಸಮಾಜಕ್ಕೆ ಪ್ರೇರಕವಾದರೆ ಅದನ್ನು ಸ್ವೀಕರಿಸುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಆಧ್ಯಾತ್ಮಿಕ ಚಿಂತನೆ, ವಿವೇಚನೆ, ವೈಜ್ಞಾನಿಕ ಮನೋಭಾವ ಈ ಮೂರು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಪರಿಪೂರ್ಣ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ವಾಮಿ ವಿವೇಕಾನಂದರು ತಮ್ಮ ಜೀವನದಲ್ಲಿ ಇದನ್ನೇ ಅಳವಡಿಸಿಕೊಂಡಿದ್ದರು ಎಂದು ಗುಂಡೂರಾವ್ ಹೇಳಿದರು.
ಯುವಜನತೆ ವಿವೇಚನೆಯಿಂದ ಕಾರ್ಯಪ್ರವೃತ್ತರಾಗಬೇಕು. ಮೊಬೈಲ್‌ನಲ್ಲಿ ಸಾಕಷ್ಟುವಿಚಾರಗಳು ಬರುತ್ತವೆ. ಆದರೆ ಅಗತ್ಯವಾದುದನ್ನು ಮಾತ್ರ ಬಳಸಿಕೊಳ್ಳಬೇಕು ಎಂದರು.ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದಜೀ ಪ್ರಾಸ್ತಾವಿಕ ಮಾತನಾಡಿದರು. ಸ್ವಾಮಿ ಸರ್ವಸ್ಥಾನಂದಜೀ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಎನ್ ಐಟಿಕೆ ನಿರ್ದೇಶಕ ಪ್ರೊ. ಬಿ. ರವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಇದ್ದರು.ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿದರು.