ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಮತ್ತು ಕೌಶಲ್ಯಾಧಾರಿತ ಶಿಕ್ಷಣ ಅತ್ಯವಶ್ಯ ಎಂದು ಜಿಲ್ಲಾ ಗಾಯಕರ ಟ್ರಸ್ಟ್ ಅಧ್ಯಕ್ಷ ಡಾ. ಮಾದೇಶ್ ಅಭಿಪ್ರಾಯಪಟ್ಟರು.

ನಗರದ ಹಾಲಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಗಾಯಕರ ಟ್ರಸ್ಟ್ ಮತ್ತು ನಿವೃತ್ತ ಆರೋಗ್ಯ ನಿರೀಕ್ಷಕ ಮಂಜುನಾಥ್ ಅವರ ಕುಟುಂಬದಿಂದ ಆಯೋಜಿಸಿದ್ದ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಮತ್ತು ಅಗತ್ಯ ಪರಿಕರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದಿನ ಮಕ್ಕಳೇ ಮುಂದಿನ ಭವ್ಯಭಾರತದ ಪ್ರಜೆಗಳು, ಪ್ರಾಥಮಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ಭವಿಷ್ಯಕ್ಕೆ ಭದ್ರಬುನಾದಿ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಮತ್ತು ಕೌಶಲ್ಯಾಧಾರಿತ ಶಿಕ್ಷಣ ಲಭ್ಯವಾಗಬೇಕು. ಎಲ್ಲ ಪೋಷಕರಿಗೆ ಮತ್ತು ಪ್ರಜೆಗಳಿಗೆ ಸರ್ಕಾರಿ ಉದ್ಯೋಗ, ಸೌಲಭ್ಯಬೇಕು. ಆದರೆ, ಸರ್ಕಾರಿ ಶಾಲೆಗಳಲ್ಲಿ ಮಾತ್ರ ತಮ್ಮ ಮಕ್ಕಳು ಓದುವಂತಿಲ್ಲ. ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವ ಪೋಷಕರ ನಿಲುವು ಬದಲಾಗಬೇಕು ಎಂದರು.

ವೈದ್ಯಕೀಯ, ತಾಂತ್ರಿಕ ಪದವಿ ಪಡೆಯುವುದಕ್ಕಷ್ಟೇ ವಿದ್ಯಾರ್ಥಿಗಳು ಸೀಮಿತವಾಗಬಾರದು. ಐಎಎಸ್, ಕೆಎಎಸ್, ಐಪಿಎಸ್, ಐಆರ್‌ಎಫ್‌ನಂತಹ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ದೊಡ್ಡ ದೊಡ್ಡ ಕನಸುಗಳ ಬೆನ್ನೇರುವ ರೀತಿ ಶಿಕ್ಷಕರು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದು ಸಲಹೆ ನೀಡಿದರು.


ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಮತ್ತು ಅಗತ್ಯಪರಿಕರ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಆರೋಗ್ಯ ನಿರೀಕ್ಷಕ ಮಂಜುನಾಥ್ ಪತ್ನಿ ನಾಗಮ್ಮ, ಶಾಲಾ ಶಿಕ್ಷಣ ಇಲಾಖೆಯ ಸಿಆರ್‌ಪಿ ಮಂಜುಳಾ, ಶಾಲಾಭಿವೃದ್ಧಿ ಸಮಿತಿಯ ಮಹೇಶ್, ಕೃಷ್ಣಪ್ಪ, ಜಯರಾಮ್, ಶಂಕರ್, ಶಾಲಾ ಮುಖ್ಯ ಶಿಕ್ಷಕಿ ಅಂಜಲಾದೇವಿ, ಅಂಬಾದೇವಿ, ಚೆನ್ನರೇವಮ್ಮ, ಎಚ್.ಪಿ.ಚೈತ್ರ, ಅನಿತಾ, ಉಷಾ, ಸುನೀತಾ ಇತರರಿದ್ದರು.ಜೂ.22 ರಿಂದ 2 ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ: ಪ್ರಶಾಂತ್ ಕಾಳಪ್ಪ

ಮಂಡ್ಯ:ನಾಗಮಂಗಲ ತಾಲೂಕು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಇನ್ಸಿಟ್ಯೂಟ್ ಆಫ್ ಮಾಲಿಕ್ಯೂಲರ್ ಮೆಡಿಸಿನ್ ಕಾಲೇಜಿನ ಬಿಜಿಎಸ್ ಆಡಿಟೋರಿಯಂನಲ್ಲಿ ಜೂ.22ರಂದು 11 ಗಂಟೆಗೆ ಭಾಷಾಂತರ ಸಂಶೋಧನೆಗಾಗಿ ಆರೋಗ್ಯ ವಿಜ್ಞಾನದಲ್ಲಿ ಅಂತರಶಿಸ್ತೀಯ ಅಪ್ರೋಚರ್ ಕುರಿತು 2 ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಾಲೇಜಿನ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರಶಾಂತ್ ಕಾಳಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಸಮ್ಮೇಳನದಲ್ಲಿ ವಿಶ್ವಾದ್ಯಂತ 500 ಮಂದಿ ಸಂಶೋಧಕರು ಹಾಗೂ 15 ಹಿರಿಯ ಸಂಶೋಧಕ ಪ್ರಧ್ಯಾಪಕರು ಭಾಗವಹಿಸಲಿದ್ದಾರೆ ಎಂದರು.ಆದಿಚುಂಚನಗಿರಿ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ಉದ್ಘಾಟಿಸುವರು. ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣ್ ಪ್ರಕಾಶ್ ರುದ್ರಪ್ಪ ಪಾಟೀಲ್ ಪಾಲ್ಗೊಳ್ಳುವರು ಎಂದರು.

ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಎಸ್‌ಇಆರ್‌ಬಿ ನ್ಯಾಷನಲ್ ಸೈನ್ಸ್‌ನ ಅಧ್ಯಕ್ಷ ಪ್ರೊ.ಕೆ.ಎನ್.ಗಣೇಶ್, ಕೆಎಸ್‌ಯುಓಯ ವಿಶ್ರಾಂತ ಕುಲಪತಿ ಹಾಗೂ ಎನ್‌ಎಎಸ್‌ಐ ಪೀಠದ ಗೌರವಾನ್ವಿತ ಪ್ರಾಧ್ಯಾಪಕ ಪ್ರೊ.ಕೆ.ಎನ್.ರಂಗಪ್ಪ ಹಾಗೂ ಜಪಾನಿನ ಹಾಕ್ಕೈಡೋ ವಿವಿಯ ಪ್ರೊ.ಶಿನ್ ಇಚಿರೊನಿಶಿಮುರ, ವಿಚಾರ ಸಂಕಿರಣದಲ್ಲಿ ಆದಿಚುಂಚನಗಿರಿ ವಿವಿಯ ಕುಲಪತಿ ಕರ್ನಲ್ ಡಾ.ಎಸ್.ಎನ್.ಶ್ರೀಧರ, ಕುಲಸಚಿವ ಡಾ.ಸಿ.ಕೆ.ಸುಬ್ಬರಾಯ ಭಾಗವಹಿಸಲಿದ್ದಾರೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಅನಿಲ್‌ಕುಮಾರ್ ಇದ್ದರು.