ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹದಿಹರೆಯದ ಯುವತಿಯರು ಪ್ರೇಮ ಪ್ರಕರಣಗಳಲ್ಲಿ ಸಿಲುಕುತ್ತಿದ್ದು, ಇದರಿಂದ ಪೋಕ್ಸೋ ಪ್ರಕರಣಗಳ ಸಂಖ್ಯೆ ಏರಿಕೆಯತ್ತ ಸಾಗುತ್ತಿದೆ ಎಂದು ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್ ಕಳವಳ ವ್ಯಕ್ತಪಡಿಸಿದರು.ತಾಲೂಕಿನ ವೆಂಕಟಯ್ಯನ ಛತ್ರ ಸರ್ಕಾರಿ ಪದವಿ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಕಾಲೇಜು ವೆಂಕಟ್ಟಯ್ಯನ ಛತ್ರ ಜಂಟಿಯಾಗಿ ಹಮ್ಮಿಕೊಂಡ ವಿದ್ಯಾರ್ಥಿಗಳಿಗೆ ಪೋಕ್ಸೋ ಮತ್ತು ಬಾಲ್ಯವಿವಾಹ ನಿಷೇಧ ಬಗ್ಗೆ ಅರಿವು ಕುರಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೋಕ್ಸೋ ಕಾಯ್ದೆ 2012ನ್ನು ಲೈಂಗಿಕ ಹಲ್ಲೆ ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ವರ್ತನೆಗಳಂತಹ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವುದಕ್ಕಾಗಿ, ಮಕ್ಕಳ ಹಿತಾಸಕ್ತಿ ಮತ್ತು ಒಳಿತಿನ ರಕ್ಷಣೆಗಾಗಿ ಜಾರಿಗೆ ಬಂದಿದೆ. ಈ ಕಾಯ್ದೆಯಡಿ ಮಕ್ಕಳ ಮೇಲಿನ ಅತ್ಯಾಚಾರ, ಶೋಷಣೆ ತಡೆಯುವುದು, ದೌರ್ಜನ್ಯ ಎಸಗಿದವರಿಗೆ ಶಿಕ್ಷೆ ವಿಧಿಸಲಾಗುತ್ತಿದೆ. ಕುಟುಂಬದ ಸದಸ್ಯರು, ಅಕ್ಕಪಕ್ಕದ ಮನೆಯವರಿಂದಲೇ ಮಕ್ಕಳು ಲೈಂಗಿಕ ಶೋಷಣೆ, ಅತ್ಯಾಚಾರಕ್ಕೆ ಒಳಗಾಗುತ್ತಿರುವುದು ವರದಿಯಾಗಿದೆ ಎಂದು ಹೇಳಿದರು.10ನೇ ತರಗತಿ, ಪಿಯುಸಿ ಓದುವ ಹಂತದಲ್ಲಿ ಬಾಲಕಿಯರು ಪ್ರೀತಿ ಮೋಹಕ್ಕೆ ಬಿದ್ದು ಸುಂದರ ಭವಿಷ್ಯಕ್ಕೆ ಕುತ್ತು ತಂದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚುತ್ತಿವೆ. ಹೆಚ್ಚಿನ ಪೋಷಕರು ತಮ್ಮ ಮಕ್ಕಳ ಬಗ್ಗೆ ಎಚ್ಚರವಹಿಸುತ್ತಿಲ್ಲ. ಶಾಲೆ, ಕಾಲೇಜು, ಟ್ಯೂಷನ್ ಹೋಗುವ ಕಡೆಗಳಲ್ಲಿ ಪೋಷಕರು ಮಕ್ಕಳ ಕುರಿತು ಗಮನ ಹರಿಸಿ ಜಾಗ್ರತೆ ವಹಿಸಬೇಕಿದೆ. ವಿದ್ಯಾರ್ಥಿನಿಯರು ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣ, ಸಿನಿಮಾ ಇತ್ಯಾದಿ ಪ್ರೇರಣೆಯಿಂದ ಸಹಪಾಠಿಗಳ ಸಹವಾಸ ದೋಷದಿಂದ ಹಾಗೂ ಮೋಸದ ಪ್ರೀತಿಗೆ ಬಿದ್ದು ಯುವತಿಯರು ದಾರಿ ತಪ್ಪುತ್ತಿದ್ದಾರೆ ಯುವತಿಯರು ಎಚ್ಚರ ವಹಿಸಬೇಕು ಎಂದರು.
ಬಾಲ್ಯವಿವಾಹ ಕಾನೂನಿನ ಪ್ರಕಾರ ಅಪರಾಧ. ಬಾಲ್ಯ ವಿವಾಹವಾಗುವ ವಯಸ್ಕ ವ್ಯಕ್ತಿ, ಪೋಷಕರು, ಮದುವೆಯಲ್ಲಿ ಭಾಗವಹಿಸುವ ಎಲ್ಲರೂ, ಅದಕ್ಕೆ ಸಹಾಯ ಮಾಡುವ ಎಲ್ಲರಿಗೂ ₹2 ಲಕ್ಷ ದಂಡ ಮತ್ತು 1 ವರ್ಷ ಜೈಲು ಶಿಕ್ಷೆ ಇದೆ ಎಂದು ತಿಳಿಸಿದರು.ಕಾಲೇಜಿನ ಪ್ರಾಂಶುಪಾಲ ಮಲ್ಲೇಶ್ ಮಾತನಾಡಿ, ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಬೇರೆ ಯಾವುದೇ ಆಕರ್ಷಣೆಗೆ, ಆಮಿಷಕ್ಕೆ ಒಳಗಾಗದೆ ಒಳ್ಳೆಯ ವಿದ್ಯಾಭ್ಯಾಸ ಪಡೆದು ಉತ್ತಮ ನಾಗರಿಕರಾಗಿ. ಸಮಾಜಕ್ಕೆ ಮತ್ತು ಮನೆಗೆ ಕೀರ್ತಿ ತರಬೇಕು. ಮಕ್ಕಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಶಾಲಾ, ಕಾಲೇಜುಗಳಲ್ಲಿ ಜ್ರಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬಾಲಕಿಯರ ಮೇಲೆ ದೌರ್ಜನ್ಯ ನಡೆದಿರುವುದು ತಿಳಿದ ತಕ್ಷಣ ಪ್ರಕರಣ ದಾಖಲಿಸಿಕೊಂಡು ಇಲಾಖೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರಶಾಂತ ಎಸ್, ಮಹೇಶ ಆರ್, ಗೋವಿಂದ ವಿ, ಪೂರ್ಣಿಮಾ ಎ, ಅನಿತಾ ಜೆ, ಶೀಲಾವತಿ ಎಸ್, ಮಹಾಂತೇಶ ಕುರುಬರ, ದೊಡ್ಡಮ್ಮ, ಶೃತಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.