ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಇಲ್ಲಿನ ಜೈನ ಹೆರಿಟೇಜ್ ಶಾಲೆಯ ಸ್ಕೌಟ್ ಆ್ಯಂಡ್ ಗೈಡ್ಸ್ ಮಕ್ಕಳು ಶುಕ್ರವಾರ ವನ್ಯಜೀವಿ ಸಪ್ತಾಹದ ಅಂಗವಾಗಿ ಶಿವಮೊಗ್ಗ ಪ್ರಾಣಿ ಸಂಗ್ರಹಾಲಯ ಭೇಟಿ ನೀಡಿದರು.ಶಿವಮೊಗ್ಗ ಮೃಗಾಲಯದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ 2025ರ ವನ್ಯಜೀವಿ ಸಪ್ತಾಹದಲ್ಲಿ ಭಾಗವಹಿಸಿ ಹುಲಿ ಮತ್ತು ಸಿಂಹ ಸಫಾರಿ ಕೈಗೊಂಡರು. ಜೊತೆಗೆ ಅರಣ್ಯ ಇಲಾಖೆ ಆಯೋಜಿಸಿದ್ದ ಪೋಸ್ಟರ್ ತಯಾರಿಕೆ ಮತ್ತು ಸೈಕಲ್ ರ‌್ಯಾಲಿಯಲ್ಲಿ ಭಾಗವಹಿಸಿ ಮೃಗಾಲಯದಲ್ಲಿ ಚಾರಣ ಕೈಗೊಂಡರು. ವನ್ಯಜೀವಿ ಸಪ್ತಾಹ ಉದ್ಘಾಟಿಸಿದ ಶಿವಮೊಗ್ಗ ಉಪಅರಣ್ಯ ಸಂರಕ್ಷಣಾಧಿಕಾರಿ ಅಮರ್ ಅಕ್ಷರ್, ಮೃಗಾಲಯದ ಸಂಶೋಧಕಿ ಸುಶ್ಮಿತಾ ಅವರನ್ನು ಭೇಟಿಯಾಗಿ ಸಂವಾದ ನಡೆಸಿದ ಮಕ್ಕಳು ಇಲಾಖೆ ಆಯೋಜಿಸಿದ್ದ ಪಕ್ಷಿವಿಜ್ಞಾನ ಕಾರ್ಯಾಗಾರದಲ್ಲಿ ಭಾಗವಹಿಸಿ ಪಕ್ಷಿಗಳ ಬಗೆಗಳು, ಕೂಗುಗಳು ಮತ್ತು ಗೂಡುಕಟ್ಟುವ ತಂತ್ರಗಳ ಬಗ್ಗೆ ಮಾಹಿತಿ ಪಡೆದರು. ಭಾರತದಲ್ಲಿ ಕಂಡುಬರುವ ವಿವಿಧ ರೀತಿಯ ಪಕ್ಷಿಗಳ ಬಗ್ಗೆ ಅಮರ್ ಅಕ್ಷರ್ ಅವರಿಂದ ಮಾಹಿತಿ ಮತ್ತು ವನ್ಯಜೀವಿ ಸಪ್ತಾಹದಲ್ಲಿ ಪಾಲ್ಗೊಂಡ ಪ್ರಮಾಣಪತ್ರಗಳನ್ನು ಪಡೆದರು.ಇದೇ ಸಂದರ್ಭದಲ್ಲಿ ಶುಕ್ರವಾರ ಒಂದು ದಿನದ ಮಟ್ಟಿಗೆ ಮೃಗಾಲಯದ ಪ್ರಾಣಿಗಳನ್ನು ಶಾಲೆಯ ಸ್ಕೌಟ್ ಆ್ಯಂಡ್ ಗೈಡ್ಸ್ ಮಕ್ಕಳು ದತ್ತು ಪಡೆದರು. ದತ್ತು ಪ್ರಕ್ರಿಯೆಯಲ್ಲಿ ಕೈಜೋಡಿಸಿದ್ದಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಶಂಸನಾ ಪತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸ್ಕೌಟ್ ಆ್ಯಂಡ್ ಗೈಡ್ಸ್ ತರಬೇತುದಾರರು, ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.