ಸಾರಾಂಶ
ಎಐಡಿಎಸ್‌ಒದಿಂದ ಸಮೀಕ್ಷೆಯಲ್ಲಿ 4 ವರ್ಷದ ಡ್ರಿಗ್ರಿ, ವಿದೇಶಿ ವಿವಿಗಳಿಗೆ ವಿದ್ಯಾರ್ಥಿಗಳ ವಿರೋಧ ವ್ಯಕ್ತವಾಗಿದೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯು ಜನಪರ ಶಿಕ್ಷಣ ನೀತಿಗಾಗಿ ರಾಜ್ಯದ 23 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಅಭಿಪ್ರಾಯ ಸಂಗ್ರಹಿಸಿ ಸಿದ್ಧಪಡಿಸಿರುವ ಸಮೀಕ್ಷೆಯನ್ನು ಬಿಡುಗಡೆ ಮಾಡಿದ್ದು, ನಾಲ್ಕು ವರ್ಷದ ಪದವಿ ಅಧ್ಯಯನವನ್ನು ಕೈಬಿಡಬೇಕೆಂದು ಶೇ.83ರಷ್ಟು ಮಂದಿ, ವಿದೇಶಿ ವಿಶ್ವವಿದ್ಯಾಲಯಗಳು ನಮ್ಮ ದೇಶಕ್ಕೆ ಬೇಡ ಎಂದು ಶೇ.86 ರಷ್ಟು ಮಂದಿ ಬಯಸಿರುವುದು ಕಂಡು ಬಂದಿದೆ.ಪ್ರಶ್ನಾವಳಿ ಮೂಲಕ ನಡೆದ ಈ ಮಾದರಿ ಸಮೀಕ್ಷೆಯಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಕಾರ್ಪೊರೇಟ್ ಕಂಪನಿಗಳ ಬಳಿ ಧನಸಹಾಯ ಪಡೆಯುವುದು ತಪ್ಪು ಎಂದು ಶೇ.80 ರಷ್ಟು ಮಂದಿ, ನಮ್ಮ ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹಾಗೂ ವಿದೇಶಿ ವಿವಿಗಳು ಬೇಡವೆಂದು ಶೇ. 86ರಷ್ಟು, ನಾಲ್ಕು ವರ್ಷದ ಪದವಿ ಅಧ್ಯಯನ ಬೇಡವೆಂದು ಶೇ.83 ರಷ್ಟು ಮಂದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಅಲ್ಲದೆ, ಸರ್ಕಾರಿ ಶಾಲಾ ಕಾಲೇಜು ನಿರ್ವಹಣೆಯ ಸಂಪೂರ್ಣ ಆರ್ಥಿಕ ಜವಾಬ್ದಾರಿ ಸರ್ಕಾರವೇ ತೆಗೆದುಕೊಳ್ಳಬೇಕೆಂದು ಶೇ. 98.52 ರಷ್ಟು ಜನ, ನಿರ್ವಹಣೆಗೆ ವಿದ್ಯಾರ್ಥಿಗಳಿಂದ ದೇಣಿಗೆ ಪಡೆಯಬಾರದೆಂದು ಶೇ.95.71 ರಷ್ಟು ಮಂದಿ, ಕಡಿಮೆ ದಾಖಲಾತಿ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನ ಅಥವಾ ಮುಚ್ಚುವುದು ತಪ್ಪು ಎಂದು ಶೇ.99 ರಷ್ಟು, ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳು ಹಾಗೂ ಮಹಾನ್ ನವೋದಯ ಚಿಂತಕರ ಕುರಿತ ಪಾಠಗಳು ಪಠ್ಯಕ್ರಮದ ಭಾಗವಾಗಬೇಕು ಎಂದು ಶೇ.97 ರಷ್ಟು ಹಾಗೂ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆಯಾಗಬೇಕೆಂದು ಶೇ. 97 ರಷ್ಟು ಮಂದಿ ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.ರಾಜ್ಯದ 9 ಸರ್ಕಾರಿ ವಿಶ್ವವಿದ್ಯಾಲಯಗಳು, 82 ಸರ್ಕಾರಿ ಪದವಿ ಕಾಲೇಜುಗಳು, 12 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು 15 ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯಗಳಿಂದ 23,120 ಜನರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಶಿಕ್ಷಣ ನೀತಿಯ ಮೇಲೆ ರಾಜ್ಯದಲ್ಲಿ ನಡೆದ ಅತಿ ದೊಡ್ಡ ಸಮೀಕ್ಷೆ ಇದಾಗಿದ್ದು, ವರದಿಯನ್ನು ರಾಜ್ಯ ಶಿಕ್ಷಣ ನೀತಿ ಆಯೋಗದ ಸಮಿತಿಯ ಸದಸ್ಯರಿಗೆ ಸಲ್ಲಿಸಲಾಗಿದೆ ಎಂದು ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))