ಗುಣಾತ್ಮಕ ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳ ಪ್ರಗತಿ

| Published : Jan 30 2025, 12:30 AM IST

ಸಾರಾಂಶ

ಪರಶುರಾಮಪುರ ಹೋಬಳಿ ಮಟ್ಟದ ಶಿಕ್ಷಕರ ಒಂದು ದಿನದ ಕಾರ್ಯಗಾರ, ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮವನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿದರು.

ಶಿಕ್ಷಕರ ಒಂದು ದಿನದ ಕಾರ್ಯಗಾರಕ್ಕೆ ಶಾಸಕ ಟಿ.ರಘುಮೂರ್ತಿ ಚಾಲನೆಕನ್ನಡಪ್ರಭ ವಾರ್ತೆ ಚಳ್ಳಕೆರೆ:

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಶಿಕ್ಷಣ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ 2022-25ರ ಅವಧಿಯಲ್ಲಿ ಒಟ್ಟು 40 ಕೋಟಿ ಹಣವನ್ನು ವಿವಿಧ ಹಂತದಲ್ಲಿ ಬಿಡುಗಡೆ ಮಾಡಲಾಗಿದೆ. ಇತ್ತೀಚಿಗಷ್ಟೇ ಕ್ಷೇತ್ರದ ಸರ್ಕಾರಿ ಶಾಲೆಗಳ ತುರ್ತು ರಿಪೇರಿಗೆ 62 ಲಕ್ಷ ಹಣ ನೀಡಿದ್ದು, ಶಿಕ್ಷಣ ಕ್ಷೇತ್ರವನ್ನು ಉನ್ನತ್ತಿಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಬುಧವಾರ ತಾಲೂಕಿನ ಚೌಳೂರು ಗ್ರಾಮದ ಅಲ್ಲಿಪೀರ್‌ ಸ್ವಾಮಿ ಮಠದ ಆವರಣದಲ್ಲಿ ಪರಶುರಾಮಪುರ ಹೋಬಳಿ ಮಟ್ಟದ ಶಿಕ್ಷಕರ ಒಂದು ದಿನದ ಕಾರ್ಯಗಾರ ಹಾಗೂ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಸರ್ವಪಲ್ಲಿ ರಾಧಕೃಷ್ಣನ್ ಮತ್ತು ಸಾವಿತ್ರಿಬಾಯಿ ಫುಲೆ ಆದರ್ಶಗಳನ್ನು ಶಿಕ್ಷಕರು ಮೈಗೂಡಿಸಿಕೊಳ್ಳಬೇಕು ಎಂದರು.

ಕ್ಷೇತ್ರದ ಎಲ್ಲಾ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಅವರ ಬದುಕಿಗೆ ಭದ್ರಬುನಾದಿ ಒದಗಿಸುವ ಗುರಿ ಶಿಕ್ಷಕರ ಮೇಲಿದೆ. ಶಿಕ್ಷಣ ಇಲಾಖೆಯ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ. ಆದರೆ, ಫಲಿತಾಂಶವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು ದಕ್ಷತೆ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ಶಿಕ್ಷಣ ಕ್ಷೇತ್ರದ ಹಿರಿಮೆ ಸದೃಢಗೊಳಿಸಬೇಕು ಎಂದರು.

ಡಿಡಿಪಿಐ ಮಂಜುನಾಥ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಈ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನಿರೀಕ್ಷಿತ ಪ್ರಗತಿ ಸಾಧಿಸಲು ಶಿಕ್ಷಣ ಇಲಾಖೆ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಬಿಇಒ ನೇತೃತ್ವದಲ್ಲಿ ವಿಷಯ ಪರಿಣಿತರ ಗುಂಪುರಚಿಸಿ ಎಲ್ಲೆಡೆ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳ ಸಂಬಂಧಿಸಿದ ಬೋಧನೆ ನೀಡಲಾಗುತ್ತಿದೆ. ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಹಲವಾರು ಶಿಕ್ಷಕಿಯರಿಗೆ ಶಾಸಕರು ಸನ್ಮಾನಿಸಿದರು.

ಈ ವೇಲೆ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ, ಕೆಡಿಪಿ ಸದಸ್ಯ ಚೌಳೂರು ಬಸವರಾಜು, ಬಿಇಒ ಕೆ.ಎಸ್.ಸುರೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ.ವೀರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರೇಶ್, ಬಿ.ಕೆ.ಗುಜ್ಜಾರಪ್ಪ ಮುಂತಾದವರು ಉಪಸ್ಥಿತರಿದ್ದರು.

ಕ್ಯಾದಿಗುಂಟೆ ಕೆರೆಗೆ ಬಾಗಿನ ಅರ್ಪಣೆ:

ಪರಶುರಾಮಪುರ ಹೋಬಳಿಯ ಕ್ಯಾದಿಗುಂಟೆ ಕೆರೆ ಕಳೆದ ಹಲವಾರು ವರ್ಷಗಳಿಂದ ತುಂಬಿರಲಿಲ್ಲ. ಇತ್ತೀಚಿಗಷ್ಟೇ ತುಂಗಾ ಹಿನ್ನೀರು ಹರಿದ ಪರಿಣಾಮ ಕೆರೆ ಕೋಡಿಬಿದ್ದಿದ್ದು, ಶಾಸಕ ಟಿ.ರಘುಮೂರ್ತಿ ಬುಧವಾರ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು.