ಸಾರಾಂಶ
ಶಾಲೆ ಮುಂಭಾಗ ಧರಣಿ ಕುಳಿತ ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೆ ಪ್ರತಿಭಟನೆ ಆರಂಭಿಸಿದರು. ಮುಖ್ಯ ಶಿಕ್ಷಕರಾಗಿರುವ ರಾಥೋಡ್ ಹಿಂದಿ ಶಿಕ್ಷಕರಾಗಿದ್ದು ಉತ್ತಮ ಬೋಧನೆ ನಡೆಸುತ್ತಾರೆ. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಹತ್ತಿರದಲ್ಲೇ ಇದೆ. ಇದರಿಂದ ಕಲಿಕೆಗೆ ತೊಂದರೆಯಾಗಿದೆ. ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ಶಾಲಾ ಆಡಳಿತ ಮಂಡಳಿ ಅವರ ವಿರುದ್ಧ ಕೈಗೊಂಡಿರುವ ಅಮಾನತು ಶಿಕ್ಷೆ ಖಂಡನಾರ್ಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ರುದ್ರಪಟ್ಟಣ ಗ್ರಾಮದ ವಿದ್ಯಾಶಂಕರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಥೋಡ್ ಅಮಾನತು ಖಂಡಿಸಿ ವಿದ್ಯಾರ್ಥಿಗಳು ಶುಕ್ರವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.ಶಾಲೆ ಮುಂಭಾಗ ಧರಣಿ ಕುಳಿತ ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೆ ಪ್ರತಿಭಟನೆ ಆರಂಭಿಸಿದರು. ಮುಖ್ಯ ಶಿಕ್ಷಕರಾಗಿರುವ ರಾಥೋಡ್ ಹಿಂದಿ ಶಿಕ್ಷಕರಾಗಿದ್ದು ಉತ್ತಮ ಬೋಧನೆ ನಡೆಸುತ್ತಾರೆ. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಹತ್ತಿರದಲ್ಲೇ ಇದೆ. ಇದರಿಂದ ಕಲಿಕೆಗೆ ತೊಂದರೆಯಾಗಿದೆ. ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ಶಾಲಾ ಆಡಳಿತ ಮಂಡಳಿ ಅವರ ವಿರುದ್ಧ ಕೈಗೊಂಡಿರುವ ಅಮಾನತು ಶಿಕ್ಷೆ ಖಂಡನಾರ್ಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಸಿಒ ಸದಾಶಿವಪ್ಪ, ಅಕ್ಷರ ದಾಸೋಹ ಅಧಿಕಾರಿ ರಂಗಸ್ವಾಮಿ ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳ ಮನವೊಲಿಸಲು ಮುಂದಾದರು. ಮುಖ್ಯ ಶಿಕ್ಷಕ ರಾಥೋಡ್ ಅವರು ಶಾಲೆಗೆ ಬರುವ ತನಕ ತರಗತಿಗೆ ಹಾಜರಾಗುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟಹಿಡಿದು, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಎಚ್.ಎಸ್. ಶಂಕರ್ ವಿರುದ್ಧ ಘೋಷಣೆ ಕೂಗಿದರು.ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಎಚ್.ಎಸ್. ಶಂಕರ್ ಮಾತನಾಡಿ, ಮುಖ್ಯ ಶಿಕ್ಷಕ ರಾಥೋಡ್ ತಮ್ಮ ಕರ್ತವ್ಯ ನಿರ್ವಹಣೆ ಮರೆತು ಒಂದು ರಾಜಕೀಯ ಪಕ್ಷದ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಮಯ ಪಾಲನೆ ಸಹ ಮಾಡದೇ ಅಶಿಸ್ತಿನಿಂದ ವರ್ತಿಸುತ್ತಿದ್ದಾರೆ. ಅಕ್ಷರ ದಾಸೋಹ ನಿರ್ವಹಣೆ ಲೆಕ್ಕಪತ್ರ ನೀಡದೆ ಅವ್ಯವಹಾರ ನಡೆಸಿದ್ದಾರೆ. ಆಡಳಿತ ಮಂಡಳಿ ವಿರುದ್ಧವೇ ದೂರು ನೀಡಿ ಆ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಿಗೆ ಹಂಚಿ ದುರ್ವತನೆ ತೋರಿದ್ದಾರೆ. ಆಡಳಿತ ಮಂಡಳಿ ನೋಟಿಸ್ ನೀಡಿದರೂ ಸಮಂಜಸ ಉತ್ತರ ನೀಡುತ್ತಿಲ್ಲ. ಈಗ ನನ್ನ ವಿರುದ್ಧ ಕೆಲವು ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ ಪ್ರತಿಭಟನೆ ನಡೆಸುವ ಪಿತೂರಿ ಹೂಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಜರುಗಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ದೂರು ನೀಡಲಾಗಿದೆ ಎಂದು ಹೇಳಿದರು.