ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ವಿಜಯಾ ಡಿ. ನಾಯ್ಕ ವಿರುದ್ಧ ಕಾಲೇಜಿನ ವಿದ್ಯಾರ್ಥಿಗಳೇ ಒಟ್ಟಾಗಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಕುಮಟಾ
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ವಿಜಯಾ ಡಿ. ನಾಯ್ಕ ವಿರುದ್ಧ ಕಾಲೇಜಿನ ವಿದ್ಯಾರ್ಥಿಗಳೇ ಒಟ್ಟಾಗಿ ಮಂಗಳವಾರ ಪ್ರತಿಭಟನೆ ನಡೆಸಿದರು.ಪ್ರಾಚಾರ್ಯೆ ವಿಜಯಾ ಡಿ. ನಾಯ್ಕ ವಿದ್ಯಾರ್ಥಿಗಳಿಂದ ವಾರ್ಷಿಕವಾಗಿ ಸಂಗ್ರಹಿಸುವ ಶುಲ್ಕದ ವೆಚ್ಚದ ಬಗ್ಗೆ ಮಾಹಿತಿ ಕೇಳಿದರೆ, ನಿಂದಿಸುತ್ತಾರೆ. ಡಿಬಾರ್ ಮಾಡುತ್ತೇನೆ, ಟಿಸಿ ಕೊಟ್ಟು ಕಳುಹಿಸುತ್ತೇನೆ, ಪೊಲೀಸರನ್ನು ಕರೆಯಿಸಿ ದೂರು ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ ಎಂದು ಆರೋಪಿಸಿ, ಇಂಥ ಪ್ರಾಚಾರ್ಯರು ನಮಗೆ ಬೇಡ, ಅವರನ್ನು ಅಮಾನತು ಅಥವಾ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಕಾಲೇಜು ಎದುರು ಪ್ರತಿಭಟಿಸಿದರು. ಪ್ರಾಚಾರ್ಯರ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆಗೆ ಎಬಿವಿಪಿ ಬೆಂಬಲ ನೀಡಿದ್ದು, ಜೆಡಿಎಸ್‌ನ ಸೂರಜ ನಾಯ್ಕ, ಕಾಂಗ್ರೆಸ್‌ನ ಭಾಸ್ಕರ ಪಟಗಾರ ಆಗಮಿಸಿ ವಿದ್ಯಾರ್ಥಿಗಳ ಪರವಾಗಿ ನಿಂತರು. ಸ್ಥಳಕ್ಕೆ ಪೊಲೀಸರು ಹಾಗೂ ತಹಸೀಲ್ದಾರ ಶ್ರೀಕೃಷ್ಣ ಕಾಮಕರ ಆಗಮಿಸಿದರು. ಪಟ್ಟು ಸಡಿಲಿಸಿದ ವಿದ್ಯಾರ್ಥಿಗಳು ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ದಿನಕರ ಶೆಟ್ಟಿ ಕರೆಸುವಂತೆ ಆಗ್ರಹಿಸಿದರು.ಈ ನಡುವೆ ಜೆಡಿಎಸ್‌ನ ಸೂರಜ ನಾಯ್ಕ ಮಾತನಾಡಿ, ಎಲ್ಲರೂ ಪರಸ್ಪರ ಸೌಹಾರ್ದಯುತವಾಗಿ ಉತ್ತಮ ಬಾಂಧವ್ಯದಿಂದ ಇರುವಂತೆ ಕಿವಿಮಾತು ಹೇಳಿದರು. ವಿದ್ಯಾರ್ಥಿಗಳ ಮೇಲೆ ನೀಡಿರುವ ದೂರನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು. ತಾನೇನೂ ತಪ್ಪು ಮಾಡಿಲ್ಲ, ತನ್ನ ಮೇಲೆ ಸುಳ್ಳು ಅಟ್ರಾಸಿಟಿ ಹಾಕಿದ್ದಾರೆಂದು ಎಲ್ಲರೆದುರು ಪ್ರಾಚಾರ್ಯೆ ವಿಜಯಾ ಡಿ.ನಾಯ್ಕ ಕಣ್ಣೀರು ಹಾಕಿದರು.
ಬಳಿಕ ಶಾಸಕ ದಿನಕರ ಶೆಟ್ಟಿ ಬಂದು ಸಮಸ್ಯೆ ಆಲಿಸಿದರು. ವಿದ್ಯಾರ್ಥಿಗಳು ಮತ್ತು ಪ್ರಾಚಾರ್ಯರ ನಡುವೆ ಒಳ್ಳೆಯ ಬಾಂಧವ್ಯ ಇರಬೇಕು. ಇಲ್ಲಿನ ಸಮಸ್ಯೆಗೆ ಪ್ರಾಚಾರ್ಯರ ವರ್ಗಾವಣೆಯೊಂದೇ ಪರಿಹಾರವಲ್ಲ ಎಂದು ತಿಳಿ ಹೇಳಿದರು. ನಂತರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರು. ಬಳಿಕ ಸಚಿವರು ವಿದ್ಯಾರ್ಥಿ ಮುಖಂಡರೊಂದಿಗೂ ಮಾತನಾಡಿದರು. ಆದರೆ ವಿದ್ಯಾರ್ಥಿಗಳು ಪ್ರಾಚಾರ್ಯರ ಅಮಾನತು ಅಥವಾ ವರ್ಗಾವಣೆಗೆ ಪಟ್ಟು ಹಿಡಿದಿದ್ದರಿಂದ ಈ ವಿಷಯದ ಬಗ್ಗೆ ಪರಿಶೀಲಿಸಿ ಕ್ರಮವಹಿಸುವ ಭರವಸೆ ನೀಡಿದರು. ವಿದ್ಯಾರ್ಥಿಗಳು ತಹಸೀಲ್ದಾರ್‌ಗೆ ಮನವಿ ನೀಡುವ ಮೂಲಕ ಪ್ರತಿಭಟನೆಗೆ ತೆರೆ ಎಳೆದರು.