ರಾಣಿಬೆನ್ನೂರು: ನೀಟ್ ಪರೀಕ್ಷೆ ಹಗರಣ, ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗಳು, ಎನ್‌ಟಿಎ ಸಂಸ್ಥೆ ರದ್ದತಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆಗೆ ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಕೆಇಬಿ ಗಣೇಶ ಗುಡಿಯಿಂದ ಹೊರಟ ವಿದ್ಯಾರ್ಥಿಗಳು ಬಸ್ ನಿಲ್ದಾಣ ಮಾರ್ಗವಾಗಿ ಪೋಸ್ಟ್ ಸರ್ಕಲ್‌ವರೆಗೆ ಸಾಗಿ ಮೆರವಣಿಗೆ ನಡೆಸಿದರು. ವಿದ್ಯಾರ್ಥಿಗಳು ದಾರಿಯುದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ, ನೀಟ್ ಪರೀಕ್ಷೆ ಹಾಗೂ ಎನ್‌ಟಿಎ ಸಂಸ್ಥೆ ರದ್ದತಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗಾಗಿ ಆಗ್ರಹಿಸಿ ಫಲಕಗಳನ್ನು ಪ್ರದರ್ಶನ ಮಾಡಿದರು.

ಈ ಸಮಯದಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಭೋವಿ ಮಾತನಾಡಿ, ದೇಶದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇತರೆ ಕೋರ್ಸಗಳಿಗೆ ಪ್ರವೇಶ ಪಡೆಯಲು ರಾಷ್ಟ್ರ ಮಟ್ಟದಲ್ಲಿ ನಡೆಸುವ ನೀಟ್ ಪರೀಕ್ಷೆ ಕುರಿತು ನಿರಂತರವಾಗಿ ಹಗರಣ ಬಯಲಿಗೆ ಬರುತ್ತಿವೆ. ಎನ್‌ಎಟಿ (ನ್ಯಾಶನಲ್ ಟೆಸ್ಟ್ ಏಜೆನ್ಸಿ) ಪರೀಕ್ಷೆಯ ನಡವಳಿಕೆ ಹಾಗೂ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಪಾರದರ್ಶಕತೆಯನ್ನು ಪ್ರಶ್ನಿಸುವ ಹಲವಾರು ದೂರುಗಳು ದೇಶಾದ್ಯಂತ ಬರುತ್ತಿವೆ. ಹೀಗಾಗಿ ಎನ್‌ಎಟಿಯು ಪ್ರವೇಶ ಪರೀಕ್ಷೆಯನ್ನು ನಡೆಸಲು ಅಸಮರ್ಥ ಮತ್ತು ಅನರ್ಹವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವರ್ಷದಿಂದ ವರ್ಷಕ್ಕೆ, ಪರೀಕ್ಷೆಯಿಂದ ಪರೀಕ್ಷೆಗೆ ಎನ್‌ಟಿಎ ಪರೀಕ್ಷೆಗಳನ್ನು ನಡೆಸುವಲ್ಲಿ ತನ್ನ ಅಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳು ಎದುರಿಸಬೇಕಾದ ಮಾನಸಿಕ ಒತ್ತಡ ಮತ್ತು ತೊಂದರೆಗಳಿಗೆ ಎನ್‌ಡಿಎ ಸರ್ಕಾರವೇ ಜವಾಬ್ದಾರರಾಗಿರಬೇಕು. ರಾಜಸ್ಥಾನ ಸೇರಿದಂತೆ ವಿವಿಧೆಡೆ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳು ನಡೆದ ಆರೋಪಗಳು ಕೇಳಿಬರುತ್ತಿವೆ ಅಕ್ರಮ ನಡೆದ ಪ್ರದೇಶಗಳಲ್ಲಿ ಕಟ್ಟುನಿಟ್ಟಾದ ಕ್ರಮವನ್ನು ತೆಗೆದುಕೊಳ್ಳಲಾಗದೆ ಎಮ್ಮೆಗೆ ಜ್ವರ ಬಂದರೆ ಎತ್ತಿಗೆ ಬರೆ ಎಳೆದರಂತೆ ಹಾಗೆ ಆಗಿದೆ. ಯಾರೋ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ ನೀಡುತ್ತಿರುವುದು ಸರಿಯಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯ ಆಧಾರಿತ ಪ್ರವೇಶ ಪರೀಕ್ಷೆ ಪದ್ಧತಿಯನ್ನು ಬದಲಾಯಿಸಲು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಲಾಗಿತ್ತು. ಈಗ ನೀಟ್-ಯುಜಿ ಗೆ ಸಂಬಂಧಿಸಿದಂತೆಯೂ ಇದೇ ಆರೋಪ ಸಾಬೀತಾಗಿದೆ. ಹೀಗೆ ಹಲವಾರು ಪರೀಕ್ಷೆಗಳನ್ನು ನಡೆಸಲು ಎನ್‌ಟಿಎ ವಿಫಲವಾಗಿದೆ. ಭ್ರಷ್ಟಾಚಾರವಾಗಿರುವುದು ಮತ್ತು ಪತ್ರಿಕೆ ಸೋರಿಕೆಯಾಗಿರುವುದು ಇದರಿಂದ ಸ್ಪಷ್ಟವಾಗಿದೆ. ಇದು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ, ಆದ್ದರಿಂದ ಎನ್‌ಟಿಎ ರದ್ದು ಪಡಿಸಬೇಕು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮದ ನೇರ ಹೊಣೆಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಎಸ್‌ಎಫ್‌ಐ ಕಾಲೇಜ್ ಘಟಕದ ಅಧ್ಯಕ್ಷೆ ಚೈತ್ರಾ ಕೊರವರ, ಜಿಲ್ಲಾ ಮುಖಂಡ ಅರುಣ್ ಕುಮಾರ್ ನಗವತ್ ಮಾತನಾಡಿದರು. ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಗೌತಮ್ ಸಾವಕ್ಕನವರ, ಮುಖಂಡರಾದ ಕರೆಯಮ್ಮನವರ, ವರ್ಷ ಪಾಟೀಲ, ಸಲ್ಮಾಬಾನು, ಮಧು, ಸೃಷ್ಟಿ ದೇವಗಿರಿ, ಫರ್ಹಾನ್ ಧಾರದವರ, ಸುನೀಲ ಟಿ., ಮನೋಜ ಚೌಡಮ್ಮನವರ, ನಂಜುಂಡಿ ಸುಡಂಬಿ, ಜೈಶಂಕರ್, ಹನುಮಂತ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.