ಪಿಯು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಲ್ಲಿ ಬೋಧನೆ ಮಾಡುತ್ತಿರುವ ಪ್ರೊ. ಮನ್ಸೂರ್ ಅಲಿಖಾನ ಖಾಜಿ ಹೊಸಪೇಟೆ ಎಂಬವರು ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ ಮಾಡುತ್ತಿದ್ದಾರೆ.
ನರಗುಂದ: ಹಲವು ವರ್ಷಗಳಿಂದ ಉಪನ್ಯಾಸಕರೊಬ್ಬರ ವರ್ತನೆಗೆ ಬೇಸತ್ತ ಸರ್ಕಾರಿ ಪಿಯು ಕಾಲೇಜಿನ 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸೋಮವಾರ ಕಾಲೇಜು ಬಂದ್ ಮಾಡಿ ದಿನವಿಡೀ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಬಾರದ ಹಿನ್ನೆಲೆ ಕಾಲೇಜಿನಿಂದ 2 ಕಿಮೀ ದೂರದಲ್ಲಿರುವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಸಿ.ಸಿ. ಪಾಟೀಲ ಅವರ ನಿವಾಸಕ್ಕೆ ಕಾಲ್ನಡಿಗೆ ಮೂಲಕ ತೆರಳಿ ತಮ್ಮ ನೋವನ್ನು ತೋಡಿಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ಅರ್ಪಿಸಿದರು.ಪಿಯು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಲ್ಲಿ ಬೋಧನೆ ಮಾಡುತ್ತಿರುವ ಪ್ರೊ. ಮನ್ಸೂರ್ ಅಲಿಖಾನ ಖಾಜಿ ಹೊಸಪೇಟೆ ಎಂಬವರು ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ ಮಾಡುತ್ತಿದ್ದಾರೆ. ಪ್ರಸಕ್ತ ವರ್ಷ ಒಂದು ತಿಂಗಳಿಂದ ಸರಿಯಾಗಿ ಕ್ಲಾಸ್ ತೆಗೆದುಕೊಂಡಿಲ್ಲ. ಈ ಕುರಿತು ಪ್ರಾಂಶುಪಾಲರಿಗೆ ದೂರು ನೀಡಿದರೆ, ವಿದ್ಯಾರ್ಥಿಗಳ ಮೇಲೆ ಧಮ್ಕಿ ಹಾಕುವುದಲ್ಲದೇ, ಅವಾಚ್ಯ ಶಬ್ದಗಳಿಂದ ಅಶ್ಲೀಲ ಪದ ಬಳಸಿ, ನಿಂದಿಸುತ್ತಾರೆ. ಪ್ರಾಂಶುಪಾಲರಿಗೂ ಅತ್ಯಂತ ಕೆಟ್ಟ ರೀತಿಯ ಪದ ಬಳಸುತ್ತಾ ಅವಾಚ್ಯ ಶಬ್ದ ಬಳಸುತ್ತಾರೆ. ಇವರ ವರ್ತನೆಗೆ ಪ್ರಾಂಶುಪಾಲರು ಸಹ ಬೇಸತ್ತಿದ್ದಾರೆ. ವಿದ್ಯಾರ್ಥಿನಿಯರು ಪಠ್ಯದ ವಿಷಯದ ಬಗ್ಗೆ ಏನಾದರೂ ಮಾಹಿತಿ ಕೇಳಿದರೆ, ನನ್ನ ಕೊಠಡಿಗೆ ಬಾ ಎನ್ನುತ್ತಾರೆ.
ಇಂತಹ ಉಪನ್ಯಾಸಕರು ನಮಗೆ ಬೇಡವೇ ಬೇಡ. ಇಂಥವರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿ ಕುಂಠಿತಗೊಳ್ಳುತ್ತದೆ. ಇವರನ್ನು ಸಸ್ಪೆಂಡ್ ಮಾಡಿ. ಇಲ್ಲವೇ ಬೇರೆ ಕಡೆ ಕೂಡಲೇ ವರ್ಗಾಯಿಸಬೇಕೆಂಬುದು ವಿದ್ಯಾರ್ಥಿಗಳು ಆಗ್ರಹಿಸಿದರು.ಶಾಸಕ ಸಿ.ಸಿ. ಪಾಟೀಲ ಅವರು ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳ ಎದುರೇ ಡಿಡಿಪಿಯು, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದರು.
ಮಂಗಳವಾರ ಡಿಡಿಪಿಯು ನರಗುಂದಕ್ಕೆ ಆಗಮಿಸಿ ಉಪನ್ಯಾಸಕನ ವಿರುದ್ಧ ದೂರು ಸಲ್ಲಿಸಬೇಕು. ದೂರನ್ನು ಸಲ್ಲಿಸಿದ ತಕ್ಷಣ ಉಪನ್ಯಾಸಕನನ್ನು ಬಂಧಿಸಬೇಕೆಂದು ಸ್ಥಳದಲ್ಲಿಯೇ ಇದ್ದ ಸಿಪಿಐ ಸತ್ಯಪ್ಪ ಮಾಳಗೊಂಡ ಅವರಿಗೆ ಸೂಚನೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.ಈ ಸಂದರ್ಭದಲ್ಲಿ ಎಬಿವಿಪಿಯ ಅಭಿಷೇಕ ನವಲಗುಂದ, ಮನೋಜ ನಾಗಠಾಣ, ಮಲ್ಲನಗೌಡ ಹಿರೇಗೌಡ್ರ, ಆಕಾಶ ಕಲಾಲ, ರುದ್ರೇಶ ಕೊಣ್ಣೂರ, ವಿದ್ಯಾರ್ಥಿನಿಯರಾದ ಕವಿತಾ ಮಾಳವಾಡ, ಸ್ನೇಹಾ ಮಾದರ, ಅಫಿಯಾ ಕೊಣ್ಣೂರ, ಸುಮಿತ್ರಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.