ಬಸ್‌ ಬುರುವಿಕೆಗಾಗಿ ವಿದ್ಯಾರ್ಥಿಗಳ ಗೋಳು

| Published : Aug 06 2024, 12:37 AM IST

ಸಾರಾಂಶ

ತಾಲೂಕಿನ ಯಲ್ಲದಕೆರೆ ವ್ಯಾಪ್ತಿಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ಯಲ್ಲದಕೆರೆಯಲ್ಲಿ ಬಸ್‌ಗಾಗಿ ಕಾಯುತ್ತಿರುವುದು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಯಲ್ಲದಕೆರೆ ವ್ಯಾಪ್ತಿಯ ನೂರಾರು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ಯಲ್ಲದಕೆರೆ ಅಕ್ಕಪಕ್ಕದ ಹಳ್ಳಿಗಳಾದ ಕೆಕೆಹಟ್ಟಿ, ಚಿಗಳಿಕಟ್ಟೆ, ಹಂದಿಗನಡು, ಬ್ಯಾರಮಡು ಗ್ರಾಮದ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳು ಯಲ್ಲದಕೆರೆಗೆ ಬಂದು ಬಸ್ ಹತ್ತುವ ಪರಿಸ್ಥಿತಿ ಇದ್ದು, ಬೆಳಗ್ಗೆ 10 ಗಂಟೆಯಾದರೂ ವಿದ್ಯಾರ್ಥಿಗಳು ಬಸ್ ಕಾಯುತ್ತಾ ಯಲ್ಲದಕೆರೆಯಲ್ಲಿಯೇ ಉಳಿಯಬೇಕಾಗಿದೆ. ಈಗಿರುವ ಯಡಿಯೂರು ಮತ್ತು ಗದಗ್ ಬಸ್‌ ಸಮಯಕ್ಕೆ ಸರಿಯಾಗಿ ಬಾರದೇ ಇರುವ ಕಾರಣ ಪ್ರತಿದಿನವೂ ಶಾಲೆ ಕಾಲೇಜುಗಳಿಗೆ ತಡವಾಗಿ ಹೋಗಬೇಕಾಗಿದೆ.

ಆದ್ದರಿಂದ ಈ ಭಾಗದ ಹಳ್ಳಿಗಳಿಗೆ ಬೆಳಗ್ಗೆ ಸಮಯದಲ್ಲಿ ಸರ್ಕಾರಿ ಬಸ್ ಸೌಲಭ್ಯ ಒದಗಿಸಿದರೆ ನೂರಾರು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ.

ದಸೂಡಿ, ಚಿತ್ರದೇವರಹಟ್ಟಿ, ಶೇಷಪ್ಪನಹಳ್ಳಿ, ಬ್ಯಾರಮಡು, ಚಿಗಳಿಕಟ್ಟೆ, ಹಂದಿಗನಡು, ಕೆಕೆಹಟ್ಟಿ ಮಾರ್ಗವಾಗಿ ಯಲ್ಲದಕೆರೆ ಮಾರ್ಗವಾಗಿ ಹಿರಿಯೂರಿಗೆ ಬೆಳಗ್ಗೆ 8:30ಕ್ಕೆ ಒಂದು ಬಸ್ ಬಿಟ್ಟರೆ ಎಲ್ಲಾ ಮಕ್ಕಳಿಗೂ ಅನುಕೂಲವಾಗುತ್ತದೆ.

ಈ ಮೊದಲು 4 ಗಂಟೆಗೆ ಸಿಂಧನೂರು ಮೈಸೂರು ಹಾಗೂ 4:30 ಕ್ಕೆ ತುರುವೇಕೆರೆ ಮೈಸೂರು ಬಸ್ ಬರುತ್ತಿದ್ದವು. ಈಗ ಅವು ಸಹ ಬರುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಮಾಡಿ ಎಂದು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಲಿ: ಯಲ್ಲದಕೆರೆ ಗ್ರಾಪಂ ಸದಸ್ಯ ಚಂದ್ರು ಬ್ಯಾರಮಡು ಮಾತನಾಡಿ, ನಮ್ಮ ಭಾಗದಲ್ಲಿ ಬಹಳ ದಿನಗಳಿಂದ ಬಸ್ ಸಮಸ್ಯೆಇದ್ದು, ಪ್ರತಿನತ್ಯ ನೂರಾರು ಮಕ್ಕಳು ನಗರದತ್ತ ಪ್ರಯಾಣಿಸುತ್ತಾರೆ. ಆದರೆ ಸಮಯಕ್ಕೆ ಸರಿಯಾಗಿ ಬಸ್ ಸಿಗದೇ ಅವರ ವಿದ್ಯಾಭ್ಯಾಸಕ್ಕೆ ತೊಡಕಾಗಿದೆ. ಆದ್ದರಿಂದ ಸಂಬಂಧಪಟ್ಟವರು ಬೆಳಗ್ಗೆ 08 ಗಂಟೆಗೆ ದಸೂಡಿ, ಶೇಷಪ್ಪನಹಳ್ಳಿ, ಬ್ಯಾರಮಡು ಚಿಗಳಿಕಟ್ಟೆ, ಕೆಕೆಹಟ್ಟಿ ಮಾರ್ಗವಾಗಿ ಯಲ್ಲದಕೆರೆ ಮೂಲಕ ಹಿರಿಯೂರು ತಲುಪುವಂತೆ ಒಂದು ಬಸ್ ವ್ಯವಸ್ಥೆ ಕಲ್ಪಿಸಿದರೆ ಈ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.