ಸಾರಾಂಶ
ಯಡೂರಿನ ಬಿ.ಟಿ. ಚೆನ್ನಯ್ಯ ಗೌರಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ೬೯ನೇ ಕನ್ನಡ ರಾಜ್ಯೋತ್ಸವ ನಡೆಯಿತು. ಹಿರಿಯ ಸಾಹಿತಿ ನ.ಲ. ವಿಜಯ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ವಿದ್ಯಾರ್ಥಿಗಳು ಕನ್ನಡತನ ರೂಢಿಸಿಕೊಳ್ಳಬೇಕು. ವಚನಕಾರರ, ದಾಸರ ಕನ್ನಡ ಪ್ರೇಮವನ್ನು, ಆಧುನಿಕ ಕವಿಗಳ ಸಾಹಿತ್ಯಿಕ ಸಾಧನೆಯನ್ನು ಹಾಗೂ ಕನ್ನಡ ನಾಡಿನ ಕಲೆ ವಾಸ್ತುಶಿಲ್ಪದ ಹಿರಿಮೆ, ಗರಿಮೆಯನ್ನು ತಿಳಿದುಕೊಳ್ಳಬೇಕು ಎಂದು ಸಂತ ಜೊಸೇಫರ್ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಕೆ.ಆರ್. ಜ್ಯೋತಿ ಸಲಹೆ ನೀಡಿದ್ದಾರೆ.ಯಡೂರಿನ ಬಿ.ಟಿ. ಚೆನ್ನಯ್ಯ ಗೌರಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ೬೯ನೇ ಕನ್ನಡ ರಾಜ್ಯೋತ್ಸವದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಹಿರಿಯ ಸಾಹಿತಿ ನ.ಲ. ವಿಜಯ ಅವರನ್ನು ಸನ್ಮಾನಿಸಲಾಯಿತು.ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಲು ಹಲವು ಸ್ಪರ್ಧೆಗಳು ಪ್ರಮುಖವಾಗಿವೆ. ಇಂತಹ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಪ್ರೋತ್ಸಾಹಿಸುವ ಕಾಲೇಜಿನಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ನಡೆಯಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಬಿ.ಡಿ. ಹರ್ಷ ಮಾತನಾಡಿ, ಕನ್ನಡ ಈ ನೆಲದ ಭಾಷೆ. ಅದರ ಸೊಗಡು ಎಲ್ಲರೂ ಉಳಿಸಿಕೊಂಡು ಬೆಳೆಸಬೇಕು ಎಂದರು.ಐಕ್ಯೂಎಸಿ ಸಂಚಾಲಕ ಎಂ.ಎಂ. ಸುನೀತಾ, ಸಾಂಸ್ಕೃತಿಕ ಸಮಿತಿ ಸಂಚಾಲಕ ಎಚ್. ಹುಚ್ಚೇಗೌಡ, ಎಚ್.ಜೆ. ಜವರಪ್ಪ ಇದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಿ.ಎಸ್. ವಿನೋದ್ ಭಾಷಣ ಸ್ಪರ್ಧೆ ವಿಜೇತರಾದವರಿಗೆ ವಿಶೇಷ ಬಹುಮಾನ ನೀಡಿದರು.
ವಿದ್ಯಾರ್ಥಿಗಳು ಹಾಡು, ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.