ವಿದ್ಯಾರ್ಥಿಗಳು ತಂತ್ರಜ್ಞಾನ ಕೌಶಲ್ಯ ಅಳವಡಿಸಿಕೊಳ್ಳಲಿ

| Published : May 14 2025, 12:03 AM IST

ಸಾರಾಂಶ

ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಬಳಸಲಾಗುತ್ತಿರುವ ನೂತನ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತೆ ಮತ್ತು ಯಂತ್ರ ಕಲಿಕೆ ವಿದ್ಯಾರ್ಥಿಗಳು ಅವಶ್ಯವಾಗಿ ಕಲಿಯಬೇಕು.

ಹಳಿಯಾಳ: ಆಧುನಿಕ ಕೈಗಾರಿಕಾ ಉದ್ಯಮ ಕ್ಷೇತ್ರ ಬಯಸುವ ತಂತ್ರಜ್ಞಾನ ಕೌಶಲ್ಯವನ್ನು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಂದಿದರೆ ಮಾತ್ರ ಯಶಸ್ಸನ್ನು ಸಾಧಿಸಬಹುದು ಎಂದು ಎಚ್.ಸಿ.ಎಲ್ ಸಾಫ್ಟ್‌ವೇರ್ ಕಂಪನಿಯ ಹಿರಿಯ ವ್ಯವಸ್ಥಾಪಕ ಮಾಧವರಾವ್ ಕುಲಕರ್ಣಿ ಹೇಳಿದರು.

ಭಾನುವಾರ ಪಟ್ಟಣದ ಕೆ.ಎಲ್.ಎಸ್ ಸಂಸ್ಥೆಯ ವಿಡಿಐಟಿ ಎಂಜಿಯರಿಂಗ್ ಕಾಲೇಜಿನಲ್ಲಿ ನಡೆದ ಕಾಲೇಜಿನ 21ನೇ ಸಂಸ್ಥಾಪನೆಯ ವರ್ಷಾಚರಣೆಯ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಬಳಸಲಾಗುತ್ತಿರುವ ನೂತನ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತೆ ಮತ್ತು ಯಂತ್ರ ಕಲಿಕೆ ವಿದ್ಯಾರ್ಥಿಗಳು ಅವಶ್ಯವಾಗಿ ಕಲಿಯಬೇಕು. ಕೌಶಲ್ಯ ಅಭಿವೃದ್ಧಿಯ ಮತ್ತು ನಿರಂತರ ಕಲಿಕೆಯಲ್ಲಿ ಅಧ್ಯಯನಶೀಲರಾಗುವಂತೆ ಕರೆ ನೀಡಿದರು.

ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಎಂಜಿನಿಯರಿಂಗ್ ಕಾಲೇಜಿನ ಮಾಜಿ ವಿದ್ಯಾರ್ಥಿ ಹಾಗೂ ಪ್ರಸ್ತುತ ರಿಸಡೆಮ್ ಇಂಡಿಯಾ ಸಂಸ್ಥೆಯ ಕಾರ್ಯ ನಿರ್ವಾಹಕ ವೈಭವ ಪದಕಿ ಕಾಲೇಜಿನಲ್ಲಿ ಕಲಿತ ತಮ್ಮಹಳೆಯ ದಿನಗಳನ್ನು ಮೆಲಕು ಹಾಕುತ್ತಾ ಮಾತನಾಡಿ ದೇಶದ ಆಂತರಿಕ ಭದ್ರತೆಗೆ ಸಹಕಾರಿಯಾಗುವ ಹಾಗೂ ಸಮಾಜಪಯೋಗಿ ಆವಿಷ್ಕಾರ ಮಾಡಲು ವಿದ್ಯಾರ್ಥಿಗಳು ಚಿಂತನೆ ನಡೆಸಿ ಕಾರ್ಯಪ್ರವೃತ್ತರಾಗಬೇಕೆಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಕೆ.ಎಲ್.ಎಸ್ ಸಂಸ್ಥೆಯ ಅಧ್ಯಕ್ಷ ಪ್ರದೀಪ್ ಎಸ್.ಸಾವ್ಕಾರ್ ಮಾತನಾಡಿ, ಮಹಾವಿದ್ಯಾಲಯವು ಕಳೆದ 21 ವರ್ಷದಲ್ಲಿ ಗುಣಮಟ್ಟದ ತಾಂತ್ರಿಕ ಶಿಕ್ಷಣದ ಜತೆಯಲ್ಲಿ ಮಾನವೀಯ ಮೌಲ್ಯ ಕಲಿಸುತ್ತಾ ಬಂದಿದೆ. ತಂತ್ರಜ್ಞಾನದ ಶಿಕ್ಷಣದ ಜತೆಯಲ್ಲಿ ಉತ್ತಮ ಚಾರಿತ್ರ್ಯ ನಿರ್ಮಾಣಕ್ಕೆ ನಾವು ಆದ್ಯತೆ ನೀಡುತ್ತಿದ್ದು, ದೇಶದ ಅಭಿವೃದ್ಧಿಗೆ ಸಹಾಯಕಾರಿಯಾಗುವಂತಹ ಉತ್ತಮ ಮಾನವ ಸಂಪನ್ಮೂಲ ನೀಡುವ ಉದ್ಧೇಶ ಸಂಸ್ಥೆಯು ಹೊಂದಿದೆ ಎಂದರು.

ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಶಾಂತ ಕುಲಕರ್ಣಿ ಮಾತನಾಡಿ, ಮಹಾವಿದ್ಯಾಲಯವು ವಿನೂತನವಾದ ಉಪಕ್ರಮಗಳಿಂದ ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಯ ಉನ್ನತೀಕರಣ ಮಾಡುತ್ತಿದೆ. ಈ ದಿಸೆಯಲ್ಲಿ ಕಾಲೇಜಿಗೆ ಬೇಕಾಗುವ ಸಕಲ ಸೌಲಭ್ಯ ನೀಡಲು ಆಡಳಿತ ಮಂಡಳಿಯು ಸದಾ ಸಿದ್ಧವಿದೆ ಎಂದರು.

ಕೆ.ಎಲ್.ಎಸ್ ಸಂಸ್ಥೆಯ ಉಪಾಧ್ಯಕ್ಷ ಆರ್.ಬಿ. ಭಂಡಾರಿ ಮತ್ತು ಸದಸ್ಯ ಆರ್.ಎಸ್. ಮುತಾಲಿಕ್ ಸಾಂದರ್ಭಿಕವಾಗಿ ಮಾತನಾಡಿದರು.

ಉದ್ಘಾಟನೆ, ಸನ್ಮಾನ: ಸಂಸ್ಥಾಪನಾ ದಿನದ ಸವಿನೆನಪಿಗಾಗಿ ಎಲೆಕ್ರ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಎಜು ಸ್ಕೀಲ್ ಹಾಗೂ ಮೈಕ್ರೋಚಿಪ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿರುವ ಸೆಂಟರ್ ಆಪ್ ಎಕ್ಸಲೆನ್ಸ್ ಕೇಂದ್ರ ಲೋಕಾರ್ಪಣೆ ಮಾಡಲಾಯಿತು.

ವಿಶ್ವವಿದ್ಯಾಲಯದ ಮಟ್ಟದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಎರಡು ಚಿನ್ನದ ಪದಕ ಪಡೆದ ಇಂಡಸ್ಟ್ರೀಯಲ್ ಎಲೆಕ್ಟ್ರಾನಿಕ್ ಎಂಟೆಕ್ ವಿದ್ಯಾರ್ಥಿನಿ ಸುಪ್ರಿಯಾ ರಜಪೂತ ಅವರನ್ನು ₹25 ಸಾವಿರ ಹಣ ನೀಡಿ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಾಧ್ಯಾಪಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಸತ್ಕರಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ಡಾ. ವಿ.ಎ.ಕುಲಕರ್ಣಿ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಕೆ.ಎಸ್.ಪೂಜಾರ್ ಮತ್ತು ಪ್ರೊ. ಲಕ್ಷ್ಮೀ ಹಟ್ಟಿಹೋಳಿ ಮತ್ತು ಪ್ರೊ. ಗೌರಿ ಎಸ್. ಕಾರ್ಯಕ್ರಮ ನಿರ್ವಹಿಸಿದರು.