ಸಾರಾಂಶ
ಸಿದ್ದಾಪುರ: ಶಿಕ್ಷಣ ಪ್ರತಿ ವ್ಯಕ್ತಿಗೂ ಅತ್ಯಗತ್ಯವಾದದ್ದು. ಶಿಕ್ಷಣದಿಂದ ಹೆಚ್ಚಿನ ಪ್ರಗತಿ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಯೂ ಅಷ್ಟೇ ಮುಖ್ಯ. ಕ್ರೀಡೆ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಇಲ್ಲಿನ ನೆಹರೂ ಮೈದಾನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಶಿರಸಿ ಶೈಕ್ಷಣಿಕ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮುಂತಾದವುಗಳ ಸಹಯೋಗದಲ್ಲಿ ನಡೆಯಲಿರುವ ಬೆಳಗಾವಿ ವಿಭಾಗಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ಕ್ರೀಡೆ ವಿದ್ಯಾರ್ಥಿಗಳಿಗೆ ಮಾನಸಿಕ ದೃಢತೆ ಕ್ರೀನೀಡುತ್ತದೆ. ತಮ್ಮ ಗುರಿಯನ್ನು ತಲುಪಲು ಸ್ಫೂರ್ತಿ ನೀಡುತ್ತದೆ. ಪಾಲಕರು ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಅಜೀಂ ಪ್ರೇಮಜೀ ತಮ್ಮ ಫೌಂಡೇಶನ್ ಮೂಲಕ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಒದಗಿಸಲು ಮುಂದಾಗಿರುವುದನ್ನು ನಾವೆಲ್ಲ ಸ್ಮರಿಸಬೇಕು ಎಂದರು.
ಮುಖ್ಯ ಅತಿಥಿ, ಸಾಮಾಜಿಕ ಧುರೀಣ ಕೆ.ಜಿ. ನಾಗರಾಜ ಮಾತನಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ ನಾಯ್ಕ, ತಾಪಂ ಕಾರ್ಯನಿರ್ವಹಣಾಧಿಕಾರಿ ದೇವರಾಜ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ ಹಾಗೂ ವಿವಿಧ ಜಿಲ್ಲೆಗಳ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಪ್ರಾಸ್ತಾವಿಕ ಮಾತನಾಡಿ ಕ್ರೀಡಾಕೂಟಕ್ಕೆ ಸಹಾಯ,ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿದರು. ಶಿರಸಿ ಶೈಕ್ಷಣಿ ಜಿಲ್ಲೆ ಉಪನಿರ್ದೇಶಕ ಬಸವರಾಜ ಪಿ. ಸ್ವಾಗತಿಸಿದರು. ನಾಗರಾಜ ಮೊಗೇರ ಭಟ್ಕಳ ನಿರೂಪಿಸಿದರು. ಚೈತನ್ಯಕುಮಾರ ವಂದಿಸಿದರು.ಪ್ರಶಾಂತಿ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿರಸಿಯ ಯಕ್ಷ ಗೆಜ್ಜೆ ತಂಡದ ಮಹಿಮಾ, ರಚನಾ ಯಕ್ಷನೃತ್ಯ ಪ್ರದರ್ಶಿಸಿದರು.
ಮಳೆಯಿಂದ ವಿಳಂಬ: ವಾಲಿಬಾಲ್ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಅಬ್ಬರದ ಮಳೆ ಸುರಿಯಿತು. ಇದರಿಂದಾಗಿ ಕಾರ್ಯಕ್ರಮ ವಿಳಂಬಗೊಂಡಿತು. ಮಳೆಯಾದರೂ ಕ್ರೀಡಾಳುಗಳ, ಕ್ರೀಡಾಭಿಮಾನಿಗಳ ಉತ್ಸಾಹ ಕುಂದಿರಲಿಲ್ಲ. ಬೆಳಗಾವಿ ವಿಭಾಗದ ೯ ಜಿಲ್ಲೆಗಳಿಂದ ಬಂದಿರುವ ಕ್ರೀಡಾಪಟುಗಳ ಜೊತೆಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕ್ರೀಡಾಸಕ್ತರಿಂದಾಗಿ ವಿಶಾಲವಾದ ನೆಹರೂ ಮೈದಾನ ಕಿಕ್ಕಿರಿದಿತ್ತು. ನಾಲ್ಕು ಅಂಕಣಗಳಲ್ಲಿ ವಾಲಿಬಾಲ್ ಕ್ರೀಡೆ ನಡೆಯಲಿದ್ದು ಸುಮಾರು ೪೦೦ಕ್ಕೂ ಹೆಚ್ಚು ವಾಲಿಬಾಲ್ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ.