ಭಾರತದ ಕ್ರೀಡಾ ಇತಿಹಾಸದಲ್ಲಿ ತಮ್ಮ ವಿಶಿಷ್ಟ ಸಾಧನೆ ಮೂಲಕ ಸರ್ವಕಾಲಕ್ಕೂ ಸ್ಮರಣೀಯರಾಗಿರುವ ಕ್ರೀಡಾಪಟುಗಳ ಸಾಲಿನಲ್ಲಿ ಮೇಜರ್ ಧ್ಯಾನ್ ಚಂದ್ ಅಗ್ರಸ್ಥಾನದಲ್ಲಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಅವರು ಹಾಕಿ ಕ್ಷೇತ್ರದಲ್ಲಿ ಮಾಡಿದ ಅದ್ವಿತೀಯ ಸಾಧನೆ ದೇಶದ ಕ್ರೀಡಾ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಕ್ರೀಡೆಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ಪಿ.ಮಹದೇವಸ್ವಾಮಿ ಹೇಳಿದರು.ತಾಲೂಕಿನ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ರಾಷ್ಟ್ರೀಯ ಕ್ರೀಡಾ ದಿನ ಮತ್ತು ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಜನ್ಮದಿನಾಚರಣೆ ಅಂಗವಾಗಿ ದೈಹಿಕ ಶಿಕ್ಷಣ ವಿಭಾಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಜನರಲ್ಲಿ ಮತ್ತು ಸಾರ್ವಜನಿಕರಲ್ಲಿ ಆರೋಗ್ಯಕರ ಜೀವನ ಶೈಲಿ ಹಾಗೂ ಸ್ಫೂರ್ತಿ ಬೆಳಸಿಕೊಳ್ಳಲು ಕ್ರೀಡೆ ಸಹಕಾರಿಯಾಗುತ್ತದೆ. ಕ್ರೀಡೆ ಕೇವಲ ದೈಹಿಕ ಚಟುವಟಿಕೆ ಅಲ್ಲ, ಅದು ಶಿಸ್ತು, ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣ ವೃದ್ಧಿಸಲಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಿ.ಯಶೋಧ ಮಾತನಾಡಿ, ಭಾರತದ ಕ್ರೀಡಾ ಇತಿಹಾಸದಲ್ಲಿ ತಮ್ಮ ವಿಶಿಷ್ಟ ಸಾಧನೆ ಮೂಲಕ ಸರ್ವಕಾಲಕ್ಕೂ ಸ್ಮರಣೀಯರಾಗಿರುವ ಕ್ರೀಡಾಪಟುಗಳ ಸಾಲಿನಲ್ಲಿ ಮೇಜರ್ ಧ್ಯಾನ್ ಚಂದ್ ಅಗ್ರಸ್ಥಾನದಲ್ಲಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಅವರು ಹಾಕಿ ಕ್ಷೇತ್ರದಲ್ಲಿ ಮಾಡಿದ ಅದ್ವಿತೀಯ ಸಾಧನೆ ದೇಶದ ಕ್ರೀಡಾ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ವಿಭಾಗದ ಪ್ರೊ. ಮಲ್ಲೇಶ್, ಆಂತರಿಕ ಗುಣಮಟ್ಟದ ಭರವಸೆ ಕೋಶದ ಸಂಚಾಲಕ ಡಾ. ಎಸ್. ಉಮೇಶ್ ಕಾಲೇಜಿನ ಅಧ್ಯಾಪಕ ಮತ್ತು ಆಧ್ಯಾಪಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದೇ ವೇಳೆ ಕಾಲೇಜಿನ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಮತ್ತು ಕಬ್ಬಡಿ ಕೋರ್ಟನ್ನು ಉದ್ಘಾಟಿಸಲಾಯಿತು.