ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಲಿ: ಮರಾಠಿ

| Published : Jul 17 2025, 12:30 AM IST

ಸಾರಾಂಶ

ಪವಿತ್ರವಾದ ಶಿಕ್ಷಕ ವೃತ್ತಿ ಮಾಡುವ ಶಿಕ್ಷಕರು ಮೌಲ್ಯಾಧಾರಿತ ವ್ಯಕ್ತಿತ್ವ ಹೊಂದಿರಬೇಕು

ಗಜೇಂದ್ರಗಡ: ಶೈಕ್ಷಣಿಕವಾಗಿ ಸತತ ಅಧ್ಯಯನದಲ್ಲಿ ತೊಡಗಿಕೊಂಡು ಮಹತ್ತರ ಗುರಿ ಸಾಧಿಸುವ ಛಲ ಹೊಂದಬೇಕು ಅಂದಾಗಲೇ ಯಶಸ್ಸು ಬೆನ್ನಿಗೇರಿ ಬರುತ್ತದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರಮೇಶ ಮರಾಠಿ ಹೇಳಿದರು.

ಸಮೀಪದ ಸೂಡಿ ಗ್ರಾಮದ ಗುರು ಮಹಾಂತೇಶ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ವಿವಿಧ ಸಾಂಘಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಉತ್ತಮ ಸಂಸ್ಕಾರಶೀಲರಾಗಿ, ಆಚಾರ ವಿಚಾರ ಗುಣ ರೂಢಿಸಿಕೊಳ್ಳಬೇಕು. ಪರೀಕ್ಷಾ ಸಮಯದಲ್ಲಿ ಎದೆಗುಂದದೇ ಸಮರ್ಥವಾಗಿ ಎದುರಿಸಲು ಮುಂದಾಗಬೇಕು. ಪಾಲಕರು ತಮ್ಮ ಕಷ್ಟ-ಕಾರ್ಪಣ್ಯ ಬದಿಗಿಟ್ಟು ಮಕ್ಕಳು ವಿದ್ಯಾವಂತರಾಗಲಿ, ಅವರಿಂದ ಸಮಾಜಕ್ಕೆ ಉಪಕಾರವಾಗಲಿ ಎಂದು ಹತ್ತು ಹಲವು ಕನಸ್ಸುಗಳನ್ನು ಕಟ್ಟಿಕೊಂಡು ಹಗಲಿರುಳು ಶ್ರಮಿಸುತ್ತಾರೆ. ಪಾಲಕರ ಆಸೆಯಂತೆ ಉತ್ತಮ ಶಿಕ್ಷಣ ಪಡೆದು ದೊಡ್ಡ ದೊಡ್ಡ ಹುದ್ದೆ ಅಲಂಕರಿಸುವಂತಾಗಬೇಕು.ಆ ಮೂಲಕ ಪಾಲಕರ ಋಣ ತೀರಿಸಬೇಕು. ಅಂದಾಗ ಅವರಿಗೆ ಸಾರ್ಥಕವೆನಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮೈಸೂರ ಮಠದ ವಿಜಯಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಪವಿತ್ರವಾದ ಶಿಕ್ಷಕ ವೃತ್ತಿ ಮಾಡುವ ಶಿಕ್ಷಕರು ಮೌಲ್ಯಾಧಾರಿತ ವ್ಯಕ್ತಿತ್ವ ಹೊಂದಿರಬೇಕು. ಕಾಯಕವೇ ಕೈಲಾಸವೆಂದು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಒಂದು ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದ ಅವರು, ಶಿಕ್ಷಣ ಕೇವಲ ಜ್ಞಾನದಾಹ ತೀರಿಸುವ ಬದಲಾಗಿ ಜೀವನ ನಿರೂಪಿಸುವಲ್ಲಿಯೂ ಪ್ರಮುಖ ಪಾತ್ರವಹಿಸಲಿದ್ದು, ಶಿಕ್ಷಣ ವ್ಯವಸ್ಥೆ ವ್ಯಕ್ತಿಯ ಘನತೆ ಹೆಚ್ಚಿಸಲಿದೆ ಎಂದರು.

ಶಿಕ್ಷಣ ಸಮಿತಿಯ ಕಾರ್ಯದರ್ಶಿ ವಿ.ಜಿ. ಶೆಟ್ಟರ್‌ ಅಧ್ಯಕ್ಷತೆ ವಹಿಸಿದ್ದರು.ಸಮಿತಿ ಉಪಾಧ್ಯಕ್ಷ ಎಸ್.ಎ. ಸೊಬಗಿನ, ಎಸ್.ಎಸ್. ಬೆಲ್ಲದ, ಎಂ.ಎಸ್. ಮಲಕಸಮುದ್ರಮಠ, ಎಸ್.ಎಸ್. ಮಠದ, ಪ್ರಸಾದ ನಿಲಯದ ಅಧ್ಯಕ್ಷ ಎಂ.ಎಸ್.ಜುಕ್ತಿಹಿರೇಮಠ, ಪ್ರಾಚಾರ್ಯ ಸಿ.ಬಿ. ಕಮ್ಮಾರ, ಉಪನ್ಯಾಸಕ ಎಸ್.ಎಸ್. ತೊಗುಣಶಿ, ಮುಖ್ಯೋಪಾಧ್ಯಾಯ ಪಿ.ಎಫ್.ಗೌಡರ. ಎಂ.ಎ. ಅಗಸಿಮನಿ, ಮಾಲಾ ಭಜಂತ್ರಿ, ಅಶ್ವಿನಿ ಅರಮನಿ, ಸುನಿತಾ ಸುಣಗಾರ, ಸವಿತಾ ಅವಾರಿ ಸೇರಿ ಇತರರು ಇದ್ದರು.