ವಿದ್ಯಾರ್ಥಿಗಳಿಗೆ ಪರಿಸರ, ಮಣ್ಣಿನ ಸೊಗಡು ತಿಳಿಸಬೇಕು: ಬಸವಂತಪ್ಪ

| Published : Oct 28 2024, 01:25 AM IST

ವಿದ್ಯಾರ್ಥಿಗಳಿಗೆ ಪರಿಸರ, ಮಣ್ಣಿನ ಸೊಗಡು ತಿಳಿಸಬೇಕು: ಬಸವಂತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಗುಡ್ಡಗಾಡು ಓಟದ ಸ್ಪರ್ಧೆಯಿಂದ ವಿದ್ಯಾರ್ಥಿಗಳಿಗೆ ನೈಜ ನೈಸರ್ಗಿಕ ಪರಿಸರ, ಮಣ್ಣಿನ ಸೊಗಡು ಗೊತ್ತಾಗಬೇಕು. ಜೊತೆಗೆ ಕ್ರೀಡೆಗಳು ಅನುಭವದ ಸ್ವಯಂ ಕಲಿಕೆಗೆ ಒಂದು ಅನನ್ಯ ಮಾರ್ಗ ಒದಗಿಸುತ್ತದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಬಸವಾಪಟ್ಟಣದಲ್ಲಿ ಗುಡ್ಡಗಾಡು ಓಟ ಬಹುಮಾನ ವಿತರಣೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಗುಡ್ಡಗಾಡು ಓಟದ ಸ್ಪರ್ಧೆಯಿಂದ ವಿದ್ಯಾರ್ಥಿಗಳಿಗೆ ನೈಜ ನೈಸರ್ಗಿಕ ಪರಿಸರ, ಮಣ್ಣಿನ ಸೊಗಡು ಗೊತ್ತಾಗಬೇಕು. ಜೊತೆಗೆ ಕ್ರೀಡೆಗಳು ಅನುಭವದ ಸ್ವಯಂ ಕಲಿಕೆಗೆ ಒಂದು ಅನನ್ಯ ಮಾರ್ಗ ಒದಗಿಸುತ್ತದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಬಸವಾಪಟ್ಟಣದ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಾವಣಗೆರೆ ವಿವಿ ಮತ್ತು ದಾವಣಗೆರೆ ವಿವಿ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಆಶ್ರಯದಲ್ಲಿ ಆಯೋಜಿಸಿದ್ದ 2024- 2025ನೇ ಸಾಲಿನ ದಾವಿವಿ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟದ ಸ್ಪರ್ಧೆ ಮತ್ತು ದಾವಿವಿ ತಂಡದ ಆಯ್ಕೆ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಗಳು ಶಾಲಾ ಶಿಕ್ಷಣದ ಮೇಲೆ ಆಳವಾದ ಪ್ರಭಾವ ಬೀರುತ್ತವೆ. ವಿದ್ಯಾರ್ಥಿಗಳಲ್ಲಿ ಚೇತರಿಕೆ ಮತ್ತು ಆರೋಗ್ಯವನ್ನು ರೂಪಿಸುತ್ತವೆ. ಶಿಕ್ಷಣವು ಕೇವಲ ಜ್ಞಾನ ಸಂಪಾದಿಸುವುದಕ್ಕಿಂತ ಹೆಚ್ಚಿನ ಮಹತ್ವವನ್ನು ಹೊಂದಿದೆ. ಈ ನಿಟ್ಟಿನಲ್ಲಿ ದಾವಿವಿ ಮಕ್ಕಳಿಗೆ ನೈಸರ್ಗಿಕ ಪರಿಸರ ಮಣ್ಣಿನ ಸೊಗಡು ಗೊತ್ತಾಗಲಿ ಎಂಬ ಉದ್ದೇಶದಿಂದ ಇಲ್ಲಿ ಗುಡ್ಡಗಾಡು ಸ್ಪರ್ಧೆ ಆಯೋಜಿಸಿರುವುದು ಪೂರಕವಾಗಿದೆ ಎಂದು ದಾವಿವಿ ಕುಲಪತಿ ಅವರಿಗೆ ಧನ್ಯವಾದ ಸಲ್ಲಿಸಿದರು.

ಕಾಲೇಜಿಗೆ ಆಟದ ಮೈದಾನ, ಕಾಂಪೌಂಡ್, ಹೆಚ್ಚುವರಿ ಕೊಠಡಿ ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲಸೌಲಭ್ಯ ಕಲ್ಪಿಸುವಂತೆ ಮನವಿ ಕೊಟ್ಟಿದ್ದೀರಿ. ಹಂತ ಹಂತವಾಗಿ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಹಿಂದೆ ಬಿ.ಎಸ್ಸಿ ಕೋರ್ಸ್ ಆರಂಭಕ್ಕೆ ಮನವಿ ಮಾಡಿದ್ದೀರಿ. ಈಗಾಗಲೇ ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಮಾಯಕೊಂಡ ಮತ್ತು ಬಸವಾಪಟ್ಟಣ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬಿ.ಎಸ್ಸಿ ಕೋರ್ಸ್ ಆರಂಭಿಸುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದರಿಂದ ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.

ಗುಡ್ಡಗಾಡು ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು, ಗ್ರಾಪಂ ಅಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.

- - -

ಟಾಪ್‌ ಕೋಟ್‌ ಹಳ್ಳಿಗಳಲ್ಲಿ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ, ಕೋವಿಡ್‌ ಹಾವಳಿಯಿಂದಾಗಿ ಸ್ಥಗಿತಗೊಂಡಿದ್ದ ಹಳೆಯ ಮಾರ್ಗಗಳಲ್ಲಿ ಬಸ್ ಓಡಿಸುವಂತೆ ಈಗಾಗಲೇ ಸೂಚನೆ ನೀಡಿದ್ದೇನೆ. ಚನ್ನಗಿರಿ ಬಸ್ ಡಿಪೋ ಆದ ತಕ್ಷಣವೇ ಬಸ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ರಸ್ತೆಗಳ ದುರಸ್ತಿಗೂ ಸೂಚಿಸಿದ್ದೇನೆ

- ಕೆ.ಎಸ್‌.ಬಸವಂತಪ್ಪ, ಶಾಸಕ, ಮಾಯಕೊಂಡ ಕ್ಷೇತ್ರ

- - - -27ಕೆಡಿವಿಜಿ37ಃ:

ಬಸವಾಪಟ್ಟಣ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಗುಡ್ಡಗಾಡು ಸ್ಪರ್ಧೆ ವಿಜೇತರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಬಹುಮಾನ ವಿತರಿಸಿದರು.