ಸಾರಾಂಶ
ಪ್ರಾಂಶುಪಾಲೆ ಸ್ವಾತಿ ಕುಲಕರ್ಣಿ, ವಿದ್ಯಾರ್ಥಿ ನಾಯಕಿ ಸಂಹಿತಾ ಜಿ.ಪಿ. ನೇತೃತ್ವದ ಶಾಲಾ ಸಂಪುಟದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಮಾಧವ ಕೃಪಾ ಶಾಲಾ ಸಂಪುಟದ ಪದಪ್ರದಾನ ಸಮಾರಂಭವನ್ನು ಮಣಿಪಾಲದ ಎಂ.ಐ.ಟಿಯ ಡಾಟಾ ಸಾಯನ್ಸ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ನಿರ್ದೇಶಕ ಡಾ.ಕರುಣಾಕರ್ ಎ. ಕೋಟೆಗಾರ್ ಶನಿವಾರ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಇಂದು ಶಾಲೆಯ ಬೇರೆ ಬೇರೆ ಜವಾಬ್ದಾರಿಗಳನ್ನು ನಿಭಾಯಿಸಲು ಆಯ್ಕೆಯಾದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜದ ರಥವನ್ನು ನಡೆಸುವ ಸಾರಥಿಗಳಾಗಬೇಕು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಣಿಪಾಲದ ಜನರಲ್ ಅಕಾಡೆಮಿ ಕಾರ್ಯದರ್ಶಿ ಸಿಎ ಬಿ.ಪಿ ವರದರಾಯ ಪೈ ಮಾತನಾಡಿ, ಯಾವುದೇ ಆಡಳಿತ ವ್ಯವಸ್ಥೆ ನಡೆಯಬೇಕಾದರೆ ನಾಯಕನ ಅಗತ್ಯವಿರುತ್ತದೆ. ಶಾಲಾ ಅಭಿವೃದ್ಧಿ ಮತ್ತು ಕೆಲಸ ಕಾರ್ಯಗಳು ಸುರಕ್ಷಿತವಾಗಿ ಉನ್ನತಿಯ ಮಟ್ಟಕ್ಕೆ ತಲುಪಲು ನಾಯಕರ ಆಯ್ಕೆ ಪ್ರಮುಖವಾಗಿದೆ. ಆಯ್ಕೆಯಾದ ಎಲ್ಲರಿಗೂ ಅಭಿನಂದನೆಗಳು ಎಂದು ಶುಭಾಶಂಸನೆಗೈದರು.ಪ್ರಾಂಶುಪಾಲೆ ಸ್ವಾತಿ ಕುಲಕರ್ಣಿ, ವಿದ್ಯಾರ್ಥಿ ನಾಯಕಿ ಸಂಹಿತಾ ಜಿ.ಪಿ. ನೇತೃತ್ವದ ಶಾಲಾ ಸಂಪುಟದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಮತ್ತು ವಿವಿಧ ಒಲಂಪಿಯಾಡ್‌ಗಳಲ್ಲಿ ಉತ್ಕೃಷ್ಟತೆ ಸಾಧಿಸಿದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಫಲಕ ಮತ್ತು ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.ಶಾಲಾ ಸಂಚಾಲಕಿ ರಾಧಿಕಾ ಪೈ, ಉಪಪ್ರಾಂಶುಪಾಲೆಯರಾದ ಶಕಿಲಾಕ್ಷಿ ಕೃಷ್ಣ, ಜ್ಯೋತಿ ಸಂತೋಷ್, ಮುಖ್ಯೋಪಾಧ್ಯಾಯಿನಿ ಆಶಾ ನಾಯಕ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಆರ್ಯನ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ಮೊಹಮ್ಮದ್ ಅಫಾಮ್ ಸ್ವಾಗತಿಸಿ, ಹರಿ ಕೀರ್ತನ್ ನಾಯಕ್ ವಂದಿಸಿದರು. ಶಾಲಾ ಶಿಕ್ಷಕಿಯರಾದ ಸತ್ಯವತಿ ಮಲ್ಯ ಮತ್ತು ದಿವ್ಯ ಕುಮಾರಿ ಕಾರ್ಯಕ್ರಮ ಸಂಘಟಿಸಿದ್ದರು.