- ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜು ಶಿವಗಂಗಾ ಸಲಹೆ । ಶ್ರೀ ಶಿವಲಿಂಗೇಶ್ವರ ಸರ್ಕಾರಿ ಕಾಲೇಜಿನ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಪದವಿ ಮುಗಿಸಿ ಹೊಸ ಜೀವನವನ್ನು ಕಟ್ಟಿಕೊಳ್ಳಲು ಸಿದ್ಧವಾಗಿರುವ ವಿದ್ಯಾರ್ಥಿಗಳಾದ ನೀವುಗಳು ಸಮಾಜದಲ್ಲಿ ಮಾದರಿ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ತಂದೆ-ತಾಯಿ ಮತ್ತು ವಿದ್ಯಾಭ್ಯಾಸ ಮಾಡಿದ ಕಾಲೇಜಿಗೆ ಉತ್ತಮ ಹೆಸರು ತರುವಂತಹ ಪ್ರಜೆಗಳಾಗಿ ಬೆಳೆದು ಸಮಾಜದಲ್ಲಿ ಜೀವನ ನಡೆಸಬೇಕು ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.ಬುಧವಾರ ಪಟ್ಟಣದ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್, ಯುವ ರೆಡ್ ಕ್ರಾಸ್, ರೋವರ್ಸ ಮತ್ತು ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ತಂದೆ- ತಾಯಿ, ಪೋಷಕರು ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿ ಮಾಡಲು ನಿಮಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಪದವಿ ಮುಗಿದ ನಂತರ ಯಾವುದೇ ಉದ್ಯೋಗವನ್ನು ಮಾಡಿರಿ. ಅದರಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ಇಟ್ಟುಕೊಂಡು ಕೆಲಸ ಮಾಡಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರ ಬೆಳೆಸಿಕೊಂಡು ಕಲಿತಾಗ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಬರಲಿದೆ ಎಂದರು.
ಶಾಸಕನಾದ ಮೇಲೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ. ಈ ಸರ್ಕಾರಿ ಡಿಗ್ರಿ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ₹4.30 ಕೋಟಿ ಅನುದಾನ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಕಾಲೇಜಿನ ಸಭೆ, ಸಮಾರಂಭಗಳನ್ನು ನಡೆಸಲು ಆಡಿಟೋರಿಯಂ ಇದ್ದು, ಇದಕ್ಕೆ ಬೇಕಾದ ಮೂಲ ಸೌಲಭ್ಯಗಳಿಲ್ಲ. ಸಭಾಂಗಣ ನವೀಕರಣಕ್ಕೆ ₹90 ಲಕ್ಷ ಅನುದಾನ ನೀಡಿದ್ದು, ಕಾಮಗಾರಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಅರಂಭಗೊಂಡಿದೆ. ಶೀಘ್ರದಲ್ಲಿಯೇ ಕಾಮಗಾರಿಯೂ ಪ್ರಾರಂಭಿಸಲಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಬಿ.ಜಿ. ಅಮೃತೇಶ್ವರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಯೋಜನಾಧಿಕಾರಿ ಜಿ.ಎಸ್. ಸುರೇಶ್, ಡಾ.ಪಾರ್ವತಮ್ಮ, ಕಲ್ಲೇಶಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಜ್ಯೋತಿಪ್ರಸಾದ್, ಶಿವರಾಜ್, ಮಧುಕುಮಾರ್, ಸಿ.ರಮೇಶ್, ಲಿಯಾಕತ್ ಆಲಿ, ಡಾ.ಮಂಜುಳಾ, ಡಾ.ಲಕ್ಷ್ಮಣ್ ನಾಯ್ಕ್, ಪ್ರಸನ್ನ, ರಮೇಶ್, ಮಂಜುಳ, ಸುರೇಶ್, ಶಕುಂತಲ, ಅಮೂಲ್ಯ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕರು ಹಾಜರಿದ್ದರು.- - -
(ಬಾಕ್ಸ್) * ಬಹುಭಾಷೆಗಳ ಅರಿವು ಬಹಳ ಮುಖ್ಯ: ಸಾಗರ್‌ಅಂತರ ರಾಷ್ಟ್ರೀಯ ಶಿಕ್ಷಣ ತಜ್ಞ ಎ.ಎಚ್. ಸಾಗರ್ ಮಾತನಾಡಿ, ಮನುಷ್ಯನಿಗೆ ಬಹುಭಾಷೆಗಳ ಜ್ಞಾನ ಬಹಳ ಮುಖ್ಯವಾಗಿದೆ. ವಿಜ್ಞಾನವನ್ನು ಅಧ್ಯಯನ ಮಾಡದೇ ಇದ್ದರೆ, ಇಂದಿನ ಯುವಪೀಳಿಗೆಗೆ ಭವಿಷ್ಯವಿಲ್ಲ. ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಆಭ್ಯಾಸ ಮಾಡಿದರೂ ಡಾಕ್ಟರ್, ಎಂಜಿನಿಯರ್ ಆಗುವ ಅವಕಾಶಗಳಿವೆ. ಇಂದಿನ ವಿದ್ಯಾರ್ಥಿಗಳಿಗೆ ಬಹಳಷ್ಟು ಆಯ್ಕೆಗಳು ಕಣ್ಣ ಮುಂದೆ ಇವೆ. ಸರಿಯಾದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಆಭ್ಯಾಸ ನಡೆಸಿದಾಗ ಉನ್ನತ ಸ್ಥಾನಗಳು ಲಭಿಸಲಿವೆ ಎಂದರು. ಪ್ರಸ್ತುತ ಅಧಿಕಾರದಲ್ಲಿ ಇರುವವರಿಗೆ ಇಂದಿನ ಯುವಪೀಳಿಗೆ ಬುದ್ಧಿವಂತರಾಗುವುದು ಬೇಡವಾಗಿದೆ. ಯುವಜನರು ಬುದ್ಧಿವಂತರಾದರೆ ನಮ್ಮನ್ನೇ ಪ್ರಶ್ನೆ ಮಾಡುತ್ತಾರೆ ಎಂಬ ಮನೋಭಾವ ಅವರಲ್ಲಿದೆ. ಪ್ರತಿಯೊಬ್ಬರಲ್ಲಿಯೂ ಸಂಶೋಧನಾತ್ಮಕ ಮನೋಭಾವನೆ ಬರಬೇಕು. ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರಶ್ನೆ ಮಾಡುವ ಮನೋಭಾವ ಎಲ್ಲರಲ್ಲಿಯೂ ಬರಬೇಕಾಗಿದೆ ಎಂದರು.- - -
-6ಕೆಸಿಎನ್‌ಜಿ1: ಸಮಾರೋಪ ಸಮಾರಂಭವನ್ನು ಶಾಸಕ ಬಸವರಾಜು ವಿ.ಶಿವಗಂಗಾ ಉದ್ಘಾಟಿಸಿದರು.