ವಿದ್ಯಾರ್ಥಿಗಳು ವೈಜ್ಞಾನಿಕ ಆಲೋಚನೆ ಬೆಳೆಸಿಕೊಳ್ಳಬೇಕು

| Published : Jul 26 2024, 01:34 AM IST

ಸಾರಾಂಶ

ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳು ವೈಜ್ಞಾನಿಕ ಆಲೋಚನೆಯನ್ನು ಬೆಳೆಸಿಕೊಂಡಾಗ ಮಾತ್ರ ಅವರು ಎಲ್ಲ ರಂಗಗಳಲ್ಲಿಯೂ ಮುಂದೆ ಬರಲು ಸಾಧ್ಯ ಎಂಬುದನ್ನು ಸಾಹಿತಿ, ವಿಚಾರವಾದಿ ಹಾಗೂ ರಾಷ್ಟ್ರೀಯವಾದಿ ಡಾ.ಅಲ್ಲಮಾ ಇಕ್ಬಾಲ್ ನೂರು ವರ್ಷಗಳ ಹಿಂದೆಯೇ ಪ್ರಬಲವಾಗಿ ಪ್ರತಿಪಾದಿಸಿದ್ದರು ಎಂದು ಹಿರಿಯ ಶಿಕ್ಷಣ ತಜ್ಞ ರಿಯಾಜ್ ಫಾರೂಖಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳು ವೈಜ್ಞಾನಿಕ ಆಲೋಚನೆಯನ್ನು ಬೆಳೆಸಿಕೊಂಡಾಗ ಮಾತ್ರ ಅವರು ಎಲ್ಲ ರಂಗಗಳಲ್ಲಿಯೂ ಮುಂದೆ ಬರಲು ಸಾಧ್ಯ ಎಂಬುದನ್ನು ಸಾಹಿತಿ, ವಿಚಾರವಾದಿ ಹಾಗೂ ರಾಷ್ಟ್ರೀಯವಾದಿ ಡಾ.ಅಲ್ಲಮಾ ಇಕ್ಬಾಲ್ ನೂರು ವರ್ಷಗಳ ಹಿಂದೆಯೇ ಪ್ರಬಲವಾಗಿ ಪ್ರತಿಪಾದಿಸಿದ್ದರು ಎಂದು ಹಿರಿಯ ಶಿಕ್ಷಣ ತಜ್ಞ ರಿಯಾಜ್ ಫಾರೂಖಿ ಹೇಳಿದರು.

ನಗರದ ಸಿಕ್ಯಾಬ್ ಇಂಜಿನಿಯರಿಂಗ್ ಹಾಗೂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ರ‍್ಯಾಂಕ್ ವಿಜೇತ ವಿದ್ಯಾರ್ಥಿ ಅಬ್ದುಲ್ ಕರೀಮ್ ಅವರ ಸನ್ಮಾನ ಸಮಾರಂಭ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಸೈಯದ ಮೆಹಮೂದ ಪೀರಾ ಹಾಷ್ಮಿ ಮಾತನಾಡಿ, ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ವಿಜ್ಞಾನ, ತಂತ್ರಜ್ಞಾನ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಸಾಧನೆಯನ್ನು ಶ್ಲಾಘಿಸಿದರು.ಅತಿಥಿ ಉಪನ್ಯಾಸಕ ಇಂಗ್ಲೆಂಡ್‌ನಲ್ಲಿರುವ ಮಿದುಳು ರಕ್ತನಾಳ ತಜ್ಞ ಡಾ.ಶುಜಾಯುದ್ದೀನ್ ಮಾತನಾಡಿ, ತಂದೆ-ತಾಯಿ ಶ್ರಮವನ್ನು ಸಾರ್ಥಕಗೊಳಿಸಲು ಉನ್ನತ ಶಿಕ್ಷಣದಲ್ಲಿ ಸಾಧನೆ ಹಾಗೂ ಉದ್ಯೋಗ ಪಡೆದುಕೊಳ್ಳುವುದು ಅತೀ ಅವಶ್ಯವಾಗಿದೆ ಎಂದು ಪ್ರತಿಪಾದಿಸಿದರು.ರ‍್ಯಾಂಕ್ ವಿಜೇತ ವಿದ್ಯಾರ್ಥಿ ಅಬ್ದುಲ್ ಕರೀಮ್ ಮಾತನಾಡಿ, ದೂರದ ಬಿಹಾರದಿಂದ ಬಂದ ತನ್ನ ಸಂಕಷ್ಟ ಪರಿಸ್ಥಿತಿಯನ್ನು ತಿಳಿದು ಸಿಕ್ಯಾಬ್ ಸಂಸ್ಥೆ ತನಗೆ ನೀಡಿದ ತನು ಮನ ಧನ ಸಹಾಯ ಹಾಗೂ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ಇಂದಿನ ಸಂಘರ್ಷಗಳೇ ನಾಳಿನ ಸಾಧನೆಗೆ ಕಾರಣವಾಗುತ್ತವೆ. ಮಾತೃಭಾಷೆ ಯಾವುದೇ ಇರಲಿ ಕಲಿಯುವ ಹಂಬಲ, ಪರಿಶ್ರಮ ನಿಮ್ಮನ್ನು ಸಾಧನೆಯ ಉತ್ತುಂಗಕ್ಕೆ ಒಯ್ಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಎ.ಪುಣೇಕರ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಎ.ಎಸ್.ಪಾಟೀಲ ಉಪಸ್ಥಿತರಿದ್ದರು. ಆರಂಭದಲ್ಲಿ ಆಸ್ಮಾ ನಾಗರದಿನ್ನಿ ಪವಿತ್ರ ಖುರಾನ್ ಪಠಣ ಹಾಗೂ ಸುಶ್ಮಿತಾ ಮತ್ತು ವೈಷ್ಣವಿ ಭಗವದ್ಗೀತೆ ವಾಚಿಸಿದರು. ಡಾ.ಮಹಮ್ಮದ ಸಮ್ಮಿಯುದ್ದೀನ್ ಅತಿಥಿಗಳನ್ನು ಸ್ವಾಗತಿಸಿದರು. ಡಾ.ಎಚ್.ಕೆ.ಯಡಹಳ್ಳಿ ನಿರೂಪಿಸಿದರು. ಡಾ.ಮಲ್ಲಿಕಾರ್ಜುನ ಮೇತ್ರಿ ವಂದಿಸಿದರು.ನಿವೃತ್ತ ಪ್ರಾಚಾರ್ಯ ಎಸ್.ಎಸ್. ಭೂಸನೂರ, ಸಲೀಂ ಜಹಗೀರದಾರ, ಸೈಯದ ಜೈನುಲ್ಲ ಆಬೆದಿನ, ಡಾ.ಸೈಯದ್ ಅಲಿಮುಲ್ಲಾ ಹುಸೇನಿ, ಡಾ.ಸಾಹೇಬ ಹುಸೇನ ಜಾಗೀರದಾರ, ಪ್ರಾಚಾರ್ಯರಾದ ಪ್ರೊ.ಮನೋಜ ಕೊಟ್ನಿಸ್, ಡಾ.ಸೈಯದ ಅಬ್ಬಾಸ್‌ ಅಲಿ, ಪ್ರೊ.ಸೈಯ್ಯದ್ ಸಮೀರ, ವಿವಿಧ ಶಾಲಾ ಕಾಲೇಜು ಮುಖ್ಯಸ್ಥರು, ಪ್ರಾಧ್ಯಾಪಕರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.