ವಿದ್ಯಾರ್ಥಿಗಳು ಕೌಶಲ ಬೆಳೆಸಿಕೊಳ್ಳಬೇಕು: ಚುಂಚಶ್ರೀ

| Published : May 11 2025, 01:18 AM IST

ಸಾರಾಂಶ

ವಿದ್ಯಾರ್ಥಿಗಳು ಸತತ ಪ್ರಯತ್ನಶೀಲರಾಗಿರಬೇಕು. ಆಗ ಮಾತ್ರ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಕೇವಲ ಅಧ್ಯಾಪಕರು ಮಾಡುವ ಪಾಠ ಪ್ರವಚನಗಳಿಂದ, ಪೋಷಕರು ತೋರುವ ಪ್ರೀತಿಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲಸುವುದಿಲ್ಲ. ಸಂಕಲ್ಪಕ್ಕೆ ಪೂರಕವಾಗಿ ಸಾಧನೆ ಮಾಡಬೇಕು. ಓದುವ ಸಂದರ್ಭದಲ್ಲಿ ಯಾರು ಸುಖವನ್ನು ಅಪೇಕ್ಷೆ ಪಡುತ್ತಾರೋ ಅವರು ಎಂದಿಗೂ ಜೀವನದಲ್ಲಿ ಏಳಿಗೆಯನ್ನು ಹೊಂದಲು ಸಾಧ್ಯವಿಲ್ಲ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪಾಲಕರು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಕನಸಿನಲ್ಲಿ ಕಷ್ಟಪಟ್ಟು ಶಿಕ್ಷಣವನ್ನು ಕೊಡಿಸುತ್ತಾರೆ. ಯಾರು ಇದನ್ನು ಅರಿತು ಜವಾಬ್ದಾರಿಯಿಂದ ಮುನ್ನಡೆಯುತ್ತಾರೋ ಅವರು ಉತ್ತಮ ಭವಿಷ್ಯ ಕಟ್ಟಿಕೊಳ್ಳುತ್ತಾರೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರ ಹೊರವಲಯದ ಎಸ್‌ಜೆಸಿಐಟಿ ಆವರಣದ ಬಿಜಿಎಸ್ ಆಡಿಟೋರಿಯಂನಲ್ಲಿ ಶನಿವಾರ ನಡೆದ ಬಿಜಿಎಸ್ ಕಾಲೇಜುಗಳ ಪದವಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಆರ್ಶೀವಚನ ನೀಡಿದ ಶ್ರೀಗಳು, ನಿರಂತರ ಅಧ್ಯಯನ ಮತ್ತು ಉತ್ತಮ ಚಿಂತನೆಯಿದ್ದರೆ ಮನಸ್ಸು ಲವಲವಿಕೆಯಿಂದ ಇರಲು ಸಾಧ್ಯ ಎಂದರು.

ಸಾಧನೆಗೆ ಸಂಕಲ್ಪ ಮಾಡಬೇಕು

ವಿದ್ಯಾರ್ಥಿಗಳು ಸತತ ಪ್ರಯತ್ನಶೀಲರಾಗಿರಬೇಕು. ಆಗ ಮಾತ್ರ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಕೇವಲ ಅಧ್ಯಾಪಕರು ಮಾಡುವ ಪಾಠ ಪ್ರವಚನಗಳಿಂದ, ಪೋಷಕರು ತೋರುವ ಪ್ರೀತಿಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲಸುವುದಿಲ್ಲ. ಸಂಕಲ್ಪಕ್ಕೆ ಪೂರಕವಾಗಿ ಸಾಧನೆ ಮಾಡಬೇಕು. ಓದುವ ಸಂದರ್ಭದಲ್ಲಿ ಯಾರು ಸುಖವನ್ನು ಅಪೇಕ್ಷೆ ಪಡುತ್ತಾರೋ ಅವರು ಎಂದಿಗೂ ಜೀವನದಲ್ಲಿ ಏಳಿಗೆಯನ್ನು ಹೊಂದಲು ಸಾಧ್ಯವಿಲ್ಲ. ತನ್ನ ಇರುವಿಕೆಯನ್ನು ಜಗತ್ತಿಗೆ ತೋರಬೇಕಾದರೆ ಪ್ರಾಮಾಣಿಕ ಪ್ರಯತ್ನ ಹಾಕಲೇಬೇಕು ಎಂದು ತಿಳಿಹೇಳಿದರು.

ವಿದ್ಯಾರ್ಥಿಗಳು ಸೃಜನಾತ್ಮಕ ಚಿಂತನೆಯೊಂದಿಗೆ, ಪ್ರಯೋಗ ಶೀಲತೆಯಿಂದ ಅಧ್ಯಯನ ಮುಂದುವರೆಸಬೇಕು ಕೌಶಲ್ಯಾಭಿವೃದ್ಧಿಯೊಂದಿಗೆ ಹೊಸ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಮತ್ತು ಪದವಿ ಪಡೆದರಷ್ಟೇ ಸಾಲದು ಸಮಾಜದ ಸೇವೆಗೆ ಸದಾ ಸಿದ್ದರಿರಬೇಕೆಂದು ಪದವಿ ವಿದ್ಯಾರ್ಥಿಗಳನ್ನು ಆಶೀರ್ವದಿಸಿದರು.

ಕೌಶಲಪೂರಿತ ಪರವಿಧರರಾಗಿ

ಸಂಸದ ಡಾ,ಕೆ,ಸುಧಾಕರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷ ಣದ ಬಾಗಿಲನ್ನು ತೆರೆದಿರುವ ಬಿಜಿಎಸ್‌ ಶಿಕ್ಷ ಣ ಸಂಸ್ಥೆ ಸದಾ ಕಾಲಕ್ಕೂ ಸ್ಮರಣೀಯವಾಗಿದೆ. ಇಲ್ಲಿ ಓದುತ್ತಿರುವ ಎಲ್ಲರೂ ಭಾಗ್ಯಶಾಲಿಗಳೇ ಆಗಿದ್ದೀರಿ. ಬಾಲಗಂಗಾಧರನಾಥ ಸ್ವಾಮೀಜಿಯವರ ಉದ್ದೇಶವೂ ಇದೇ ಆಗಿತ್ತು. ಕೇವಲ ಪದವೀಧರರಾದರೆ ಸಾಲದು ಕೌಶಲ್ಯಪೂರಿತ ಪದವೀಧರರಾಗುವ ಅಗತ್ಯವಿದೆ ಎಂದರು.

ದೇಶದ ನೂರಾರು ಕೋಟಿ ಜನಸಂಖ್ಯೆಯಲ್ಲಿ ಕೋಟ್ಯಂತರ ಪದವೀಧರರಿದ್ದಾರೆ. ಅದರಲ್ಲಿ ಕೆಲವೇ ಲಕ್ಷ ದ ಮಂದಿ ಉತ್ತಮ ಉದ್ಯೋಗ ಮತ್ತು ಉದ್ಯಮಿಗಳಾಗಿದ್ದಾರೆ. ಯಾಕೆ ಹೀಗಾಯಿತು ಎಂದರೆ ಕೌಶಲ್ಯವಿಲ್ಲದ ಪದವಿ ಕೇವಲ ಪ್ರಮಾಣ ಪತ್ರವಾಗುತ್ತದೆ ಅಷ್ಟೇ ಎಂಬುದನ್ನು ಅರಿತು ಓದಬೇಕಿದೆ. ವಿದ್ಯಾರ್ಥಿಗಳೇ ದೇಶದ ರಾಯಭಾರಿಗಳು, ದೊಡ್ಡ ಕನಸುಗಳನ್ನು ಕಾಣಬೇಕು ಅದಕ್ಕೆ ತಕ್ಕಂತೆ ದಿಟ್ಟ ಹೆಜ್ಜೆಯನ್ನು ಇಡಬೇಕು ಆಗ ಜೀವನದಲ್ಲಿ ಯಶಸ್ಸನು ಕಾಣಲು ಸಾಧ್ಯ ಎಂದು ತಿಳಿಸಿದರು.

ದೇಶಕ್ಕೆ ಕೊಡುಗೆ ನೀಡಬೇಕು

ಐಐಎಸ್‌ಸಿಯ ವಿಜ್ಞಾನಿ ಡಾ.ಗೌತಮ್‌ ರಾಧಾಕೃಷ್ಣ ದೇಸಿರಾಜು ಮಾತನಾಡಿ, ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯದ ವಿಷಯಗಳಷ್ಟಕ್ಕೆ ಸೀಮಿತವಾಗದೇ ಸಾಮಾಜಿಕ ಕಳಕಳಿಯನ್ನು ಹೊಂದುವುದರ ಮೂಲಕ ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಬೇಕು. ನಿರಂತರ ಆವಿಷ್ಕಾರ, ಸಂಶೋಧನೆಗಳಿಂದ ಮಹತ್ತರವಾದ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಇದರಿಂದ ಎಲ್ಲ ರಂಗಗಳಲ್ಲೂ ಅಭಿವೃದ್ಧಿಯ ವೇಗ ಹೆಚ್ಚಾಗಿದೆ. ಇದಕ್ಕೆ ಅನುಗುಣವಾಗಿ ಯುವ ಜನಾಂಗ ಬೆಳೆಯಬೇಕು ಎಂದರು.

ಬಿಜಿಎಸ್‌ ಸಂಸ್ಥೆಗಳ ಆಡಳಿತಾಧಿಕಾರಿ ಎನ್‌.ಶಿವರಾಮರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಬೇಜವಾಬ್ದಾರಿ ಮನೋಭಾವನೆಯನ್ನು ಮೊದಲು ಬಿಡಬೇಕು. ನಿರಂತರ ಅಧ್ಯಯನದ ಜೊತೆಗೆ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

672 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಘಟಿಕೋತ್ಸವದಲ್ಲಿ ಒಟ್ಟು 672 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಎಸ್ ಜೆಸಿಐಟಿ ಪ್ರಾಂಶುಪಾಲ ಡಾ,ಜಿ.ಟಿ.ರಾಜು, ವಕ್ಕಲಿಗರ ಸಂಘದ ರಾಜ್ಯ ಕಾರ್ಯದರ್ಶಿ ಕೋನಪ್ಪರೆಡ್ಡಿ, ಡೀನ್ ಡಾ.ಮಧುಸೂಧನ್,ಬಿಜಿಐಎಂಎಸ್ ಪ್ರಾಂಶುಪಾಲ ಡಾ.ವೆಂಕಟೇಶ್ ಬಾಬು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.