ಗದಗ: ವಿದ್ಯಾರ್ಥಿಗಳ ವೃತ್ತಿಜೀವನ ನಿರ್ಮಾಣದಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಉದ್ಯಮ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನ, ಸಂವಹನ ಕೌಶಲ್ಯ ಹಾಗೂ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದು ಆರ್.ಟಿ.ಇ. ಸೊಸೈಟಿಯ ಗೌರವ ಕಾರ್ಯದರ್ಶಿ ಸಚಿನ್ ಡಿ. ಪಾಟೀಲ ತಿಳಿಸಿದರು.

ತಾಲೂಕಿನ ಹುಲಕೋಟಿ ಗ್ರಾಮದ ಆರ್.ಟಿ.ಇ. ಸೊಸೈಟಿಯ ರೂರಲ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ತರಬೇತಿ ಮತ್ತು ನಿಯೋಜನಾ (Training & Placement) ಘಟಕದ ವತಿಯಿಂದ ನಡೆದ ಪ್ಲೇಸ್‌ಮೆಂಟ್ ಓರಿಯಂಟೇಶನ್ ಕಾರ್ಯಕ್ರಮ ಹಾಗೂ ಪೋಷಕರ–ಶಿಕ್ಷಕರ ಸಭೆ ಉದ್ಘಾಟಿಸಿ ಮಾತನಾಡಿದರು.ಕಾಲೇಜಿನಲ್ಲಿ ಆಯೋಜಿಸುವ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಲು ಪೋಷಕರು ಪ್ರೋತ್ಸಾಹಿಸಬೇಕು ಎಂದರು.

ಪ್ರಾಂಶುಪಾಲ ಡಾ. ಬಿ.ಎನ್. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶ ಕಲ್ಪಿಸಲು ಕಾಲೇಜು ನಿರಂತರವಾಗಿ ಕೌಶಲ್ಯಾಭಿವೃದ್ಧಿ ಮತ್ತು ಕೈಗಾರಿಕಾ ಸಹಯೋಗದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.

ಈ ವೇಳೆ ಆಡಳಿತಾಧಿಕಾರಿ ಡಾ. ವಿ.ಎಂ. ಪಾಟೀಲ, ಡಾ. ಭಾರ್ಗವ್ ಎಚ್.ಕೆ. ಸೇರಿದಂತೆ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಚಂದ್ರಕಾಂತ ವಟವಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ತೇಜಸ್ವಿನಿ ಬಡಿಗೇರ ಪ್ರಾರ್ಥಿಸಿದರು. ಪ್ರೊ. ಜಗದೀಶ್.ಎಂ ನಿರೂಪಿಸಿದರು.