ಕನ್ನಡಪ್ರಭ ವಾರ್ತೆ ನಾಗಮಂಗಲ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯದಿಂದ ಉನ್ನತ ವ್ಯಾಸಂಗ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಂಡು ಕುಟುಂಬಕ್ಕೆ ಆಧಾರ ಸ್ತಂಭವಾಗಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದ ಹೊರವಲಯ ದೇವಲಾಪುರ ಹ್ಯಾಂಡ್‌ಪೋಸ್ಟ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 1 ಕೋಟಿ ರು. ವೆಚ್ಚದ ಕ್ರೀಡಾ ಹಾಗೂ ಜಿಮ್ ಕೊಠಡಿ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ನಾಡಿನ ಅಭಿವೃದ್ಧಿ ಜೊತೆಗೆ ರೈತರು, ಜನಸಾಮಾನ್ಯರ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ ಎಂದರು.

ಗ್ರಾಮೀಣ ಭಾಗದ ಮಕ್ಕಳಿಗೆ ಅತಿ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ನಾನು ಈ ಹಿಂದೆ ಶಾಸಕ, ಸಚಿವನಾಗಿದ್ದ ಅವಧಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ, ಪಾಲಿಟೆಕ್ನಿಕ್ ಹಾಗೂ ಐಟಿಐ ಕಾಲೇಜುಗಳನ್ನು ಮಂಜೂರು ಮಾಡಿಸಿ ಕಟ್ಟಡ ನಿರ್ಮಿಸಲಾಯಿತು. ಅಲ್ಲದೇ, ಹತ್ತಾರು ಸರ್ಕಾರಿ ಪ್ರೌಢಶಾಲೆ, ವಿವಿಧ ವಸತಿ ಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜುಗಳನ್ನೂ ಕೂಡ ಮಂಜೂರು ಮಾಡಿಸಿದ್ದೇನೆ ಎಂದರು.

ಕಾಲೇಜಿನ ವಿದ್ಯಾರ್ಥಿಗಳ ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕೆಲ ದಿನಗಳ ಹಿಂದೆ ಸುಸಜ್ಜಿತ ಆಡಿಟೋರಿಯಂ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಯ ಜೊತೆಗೆ, ಆರೋಗ್ಯ ಹಾಗೂ ದೈಹಿಕ ಸಾಮರ್ಥ್ಯಕ್ಕಾಗಿ 1 ಕೋಟಿ ರು. ವೆಚ್ಚದಲ್ಲಿ ಜಿಮ್ ಮತ್ತು ಕ್ರೀಡಾ ಕೊಠಡಿ ನಿರ್ಮಿಸಲಾಗುತ್ತಿದೆ ಎಂದರು.


ಮುಂದಿನ ಮೂರು ತಿಂಗಳಲ್ಲಿ ಕಾಲೇಜಿನ ಮುಂಭಾಗಕ್ಕೆ ಅತ್ಯವಶ್ಯಕವಾಗಿರುವ ಕಾಂಪೌಂಡ್ ಜೊತೆಗೆ ಸುಸಜ್ಜಿತವಾದ ಗ್ರಂಥಾಲಯ ಕಟ್ಟಡವನ್ನೂ ಕೂಡ ನಿರ್ಮಿಸಿಕೊಡಲಾಗುವುದು. ಒಟ್ಟಾರೆ ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಅಗತ್ಯವಾದ ಎಲ್ಲಾ ಬಗೆಯ ಮೂಲ ಸೌಕರ್ಯ ಒದಗಿಸಲಾಗುವುದು ಎಂದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಕಾಲೇಜಿನ ಪ್ರಾಂಶುಪಾಲೆ ವೈ.ಎನ್.ನೇತ್ರಾವತಿ, ಮುಖಂಡರಾದ ಸುನಿಲ್ ಲಕ್ಷ್ಮೀಕಾಂತ್, ನರಸಿಂಹಮೂರ್ತಿ, ಅಲ್ಪಹಳ್ಳಿ ಡಿ.ಕೃಷ್ಣೇಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶಿವಣ್ಣಗೌಡ, ಮಂಜೇಶ್, ಕೆ.ಸೀತಾರಾಮು, ಸಿಬ್ಗತ್ ಅಲಿಖಾನ್, ಅಭಿಷೇಕ್‌ಗೌಡ, ಪ್ರವೀಣ್, ನೀಲಾಮೂರ್ತಿ, ಗೃಹ ನಿರ್ಮಾಣ ಮಂಡಳಿ ಎಇಇ ರಾಜೇಂದ್ರ, ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಇದ್ದರು.