ಸಾರಾಂಶ
ಬಾಪೂಜಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳಿಗೆ ಅಭಿನಂದನೆ । ಆರೋಗ್ಯ ಶಿಬಿರ, ವಸ್ತುಪ್ರದರ್ಶನ
ಕನ್ನಡಪ್ರಭ ವಾರ್ತೆ ದಾವಣಗೆರೆಬಾಪೂಜಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳು ನಿಮ್ಮ ಶಾಲೆಯನ್ನು ನವೀಕರಿಸಿ ಸುಂದರಗೊಳಿಸಿದ್ದಾರೆ. ಮುಂದೆ ನೀವು ಬೆಳೆದು ದೊಡ್ಡವರಾದ ಮೇಲೆ ಇದೇ ರೀತಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ದಾವಣಗೆರೆ ಉತ್ತರ ವಲಯದ ಕಂದನಕೋವಿ ಗ್ರಾಮದಲ್ಲಿ ಶನಿವಾರ ಸರ್ಕಾರಿ ಪ್ರೌಢಶಾಲೆಯ ನವೀಕರಣ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಮಕ್ಕಳ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿ, ನಮ್ಮ ಶಾಲೆ-ನಮ್ಮ ಜವಾಬ್ದಾರಿ ಎಂದು ಪ್ರತಿಯೊಬ್ಬರೂ ನಿಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೀಸಲಿಡಬೇಕು. ನಿಮ್ಮ ಹಿರಿಯರಿಗೂ ಇದರ ಬಗ್ಗೆ ಮಾಹಿತಿ ಕೊಡಬೇಕೆಂದು ಮಕ್ಕಳಿಗೆ ಕರೆ ನೀಡಿದರು.ಶಿಕ್ಷಣದ ಜೊತೆಗೆ ಆರೋಗ್ಯದ ಮಹತ್ವ ಕುರಿತು ಮಕ್ಕಳೊಡನೆ ಸಂವಾದ ನಡೆಸಿ, ಎಸ್.ಎಸ್.ಕೇರ್ ಟ್ರಸ್ಟ್ ಮೂಲಕ ನೀಡುತ್ತಿರುವ ಸೇವೆಗಳನ್ನು ಮಕ್ಕಳಿಗೆ ಮತ್ತು ಗ್ರಾಮಸ್ಥರಿಗೆ ತಿಳಿಸಿದರು. ದಂತ ಆರೋಗ್ಯಕ್ಕೆ ಸಂಬಂಧಪಟ್ಟಂತೆ, ‘ಮುಗುಳ್ನಗೆ’ ಹಾಗೂ ರಕ್ತದಾನ ಮತ್ತು ರಕ್ತಹೀನತೆ ಜಾಗೃತಿ ಮೂಡಿಸುವ ‘ಪ್ರತಿಜ್ಞಾ’ ಕಾರ್ಯಕ್ರಮಗಳ ಬಗ್ಗೆ ತಿಳಿಸುತ್ತಾ ಜಿಲ್ಲೆಯ 45 ಶಾಲೆಗಳಲ್ಲಿ 6 ಸಾವಿರ ಮಕ್ಕಳ ದಂತ ತಪಾಸಣೆ ನಡೆಸಿ 2ಸಾವಿರ ಮಕ್ಕಳಿಗೆ ಚಿಕಿತ್ಸೆನೀಡಲಾಗಿದೆ ಎಂದರು.
ರಾಜ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡುವ ಯೋಜನೆಯಲ್ಲಿ ದಾವಣಗೆರೆ ಜಿಲ್ಲೆ ಮುಂಚೂಣಿಯಲ್ಲಿದ್ದು 2 ಕೋಟಿ 75 ಲಕ್ಷ ರೂ.ಗಳನ್ನು ಸಂಗ್ರಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಮಕ್ಕಳೊಡನೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಶಾಲೆಗೆ ಅಗತ್ಯವಿರುವ ವಿದ್ಯುತ್, ಸಿಸಿ ಕ್ಯಾಮರಾ ಅಳವಡಿಕೆ ಇತ್ಯಾದಿಗಳ ಬಗ್ಗೆ ಗ್ರಾಮಸ್ಥರು ಕೈಜೋಡಿಸಬೇಕೆಂದು ಕರೆನೀಡಿ, ತಮ್ಮ ಸಂಸ್ಥೆಯ ಉಚಿತ ಆರೋಗ್ಯ ಶಿಬಿರಗಳ ಉಪಯೋಗ ಪಡೆಯಬೇಕೆಂದರು.ಬಾಪೂಜಿ ಅಲ್ಯುಮ್ನಿ ಟ್ರಸ್ಟ್ ಅಧ್ಯಕ್ಷ ಎಸ್.ಟಿ.ವೀರೇಶ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಗ್ರಾಮಕ್ಕೆ ಪದವಿಪೂರ್ವ ಕಾಲೇಜಿನ ಅವಶ್ಯಕತೆ ಇದೆ. ಈ ಬಗ್ಗೆ ಸಂಸದರು, ಅಧಿಕಾರಿಗಳು ಮತ್ತು ಗ್ರಾಮಸ್ಥರು ಚಿಂತನೆ ನಡೆಸಬೇಕೆಂದರು. ಸರ್ಕಾರಿ ಶಾಲೆಗಳ ನವೀಕರಣ ಕಾರ್ಯದಲ್ಲಿ ಇದು ಎರಡನೇ ಶಾಲೆಯಾಗಿದ್ದು ಶಾಮನೂರು ಜನತಾ ಕಾಲೋನಿಯಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯ ನಂತರ ಇದೀಗ ಕಂದನಕೋವಿ ಪ್ರೌಢಶಾಲೆಯು ನವೀಕರಣಗೊಂಡಿದೆ. ವಿದೇಶದಿಂದ ಬಂದ ಸ್ನೇಹಿತರ ಜೊತೆಗೆ ಸುಮಾರು ನೂರು ಜನ ಸ್ನೇಹಿತರು ಇಂದಿನ ಸ್ನೇಹಸಮ್ಮಿಲನದಲ್ಲಿ ಪಾಲ್ಗೊಂಡು ಸಂಭ್ರಮಪಟ್ಟಿದ್ದೇವೆ. ಈ ಸಮಾಜಮುಖಿ ಕಾರ್ಯದಿಂದ ಗ್ರಾಮಸ್ಥರ ಶ್ಲಾಘನೆ ನಮಗೆ ಸ್ಫೂರ್ತಿ ತಂದಿದೆ ಎಂದರು.
ಡಿಡಿಪಿಐ ಬಿ.ಕೊಟ್ರೇಶ, ಬಿಇಒ ಶೇರ್ ಅಲಿ, ಗ್ರಾಪಂ ಅಧ್ಯಕ್ಷೆ ಭಾರತಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜಪ್ಪ, ಮುಖ್ಯ ಶಿಕ್ಷಕಿ ಸವಿತಾ ಇತರರು ಇದ್ದರು. ಯೋಗಾನಂದ ಪತ್ತಾರ್, ಉಷಾ, ಗ್ರಾಮಸ್ಥರು, ಪೋಷಕರು, ವಿದ್ಯಾರ್ಥಿಗಳು, ಅಲುಮ್ನಿ ಪದಾಧಿಕಾರಿಗಳು ಭಾಗವಹಿಸಿದ್ದರು.