ವಿದ್ಯಾರ್ಥಿಗಳು ಯಶಸ್ಸು ಸಿಕ್ಕಾಗ ವಿನಯದಿಂದಿರಬೇಕು, ಕಷ್ಟಗಳು ಎದುರಾದಾಗ ತಾಳ್ಮೆ ಹಾಗೂ ಧೈರ್ಯದಿಂದಿದ್ದು ಮತ್ತೆ ಮುನ್ನಡೆಯಬೇಕು ಎಂದು ರಾಜ್ಯಪಾಲರಾದ ಥಾವರಚಂದ ಗೆಹಲೋಟ್ ಕಿವಿಮಾತು ಹೇಳಿದರು.
ಕನ್ನಡಪ್ರಭ ವಾರ್ತೆ ಬೀದರ್
ವಿದ್ಯಾರ್ಥಿಗಳು ಯಶಸ್ಸು ಸಿಕ್ಕಾಗ ವಿನಯದಿಂದಿರಬೇಕು, ಕಷ್ಟಗಳು ಎದುರಾದಾಗ ತಾಳ್ಮೆ ಹಾಗೂ ಧೈರ್ಯದಿಂದಿದ್ದು ಮತ್ತೆ ಮುನ್ನಡೆಯಬೇಕು ಎಂದು ರಾಜ್ಯಪಾಲರಾದ ಥಾವರಚಂದ ಗೆಹಲೋಟ್ ಕಿವಿಮಾತು ಹೇಳಿದರು.ಅವರು ನಗರದ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಬಾಂಗಣದಲ್ಲಿ ಬೀದರ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದ ನಿಮಿತ್ತ ಪದಕ ಪಡೆದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯದಿಂದ ಪಡೆದ ಶಿಕ್ಷಣವು ವೃತ್ತಿಜೀವನದ ಯಶಸ್ಸಿನ ಜೊತೆಗೆ ಜೀವನವನ್ನು ಸಾರ್ಥಕಗೊಳಿಸಲು ಸಹಕಾರಿಯಾಗಬೇಕು ಎಂದರು.
ಇಂದು ಕೃತಕ ಬುದ್ಧಿಮತ್ತೆ ಹಾಗೂ ಹೊಸ ತಂತ್ರಜ್ಞಾನಗಳು ಜಗತ್ತನ್ನು ವೇಗವಾಗಿ ಬದಲಾಯಿಸುತ್ತಿವೆ. ಕೃಷಿ, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ, ಡಿಜಿಟಲ್ ಸೇವೆಗಳು, ಪರಿಸರ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಹೊಸ ಆಲೋಚನೆಗಳು ಹಾಗೂ ಸ್ಟಾರ್ಟಪಗಳಿಗೆ ಅಪಾರ ಅವಕಾಶಗಳಿವೆ. ಸ್ಥಳೀಯ ಸಮಸ್ಯೆ ಗಳನ್ನು ಅವಕಾಶಗಳಾಗಿ ಪರಿವರ್ತಿಸಿ, ಜ್ಞಾನ ಮತ್ತು ದೃಢಸಂಕಲ್ಪದೊಂದಿಗೆ ಹೊಸ ಪ್ರಯತ್ನಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ಭಾರತದ ಸಾವಿರಾರು ವರ್ಷಗಳ ಜ್ಞಾನ ಪರಂಪರೆ ಅಮೂಲ್ಯವಾದದ್ದು, ಭಾರತೀಯ ಜ್ಞಾನ ಪರಂಪರೆಯ ಬೇರುಗಳು ಹಾಗೂ ಆಧುನಿಕ ವಿಜ್ಞಾನದ ರೆಕ್ಕೆಗಳನ್ನು ಹೊಂದಿರುವ ಭಾರತವನ್ನು ನಿರ್ಮಿಸಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ–2047’ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಂದು ವಿಶ್ವ ವಿದ್ಯಾಲಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೇ ನಾಳೆಯ ವಿಜ್ಞಾನಿಗಳು, ಶಿಕ್ಷಕರು, ಉದ್ಯಮಿಗಳು, ವೈದ್ಯರು, ಆಡಳಿತಗಾರರು ಹಾಗೂ ರಾಷ್ಟ್ರ ನಿರ್ಮಾತೃ ಗಳಾಗಲಿದ್ದಾರೆ ಎಂದು ಹೇಳಿದರು.ಕಲ್ಯಾಣ ಕರ್ನಾಟಕದಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಗುಣಮಟ್ಟದ ಶಿಕ್ಷಣ, ಕೌಶಲ್ಯ, ಸಂಶೋಧನೆ ಮತ್ತು ಆಧುನಿಕ ಅವಕಾಶಗಳೊಂದಿಗೆ ಯುವ ಪ್ರತಿಭೆಯನ್ನು ಬೆಳೆಸುವ ಅಗತ್ಯವಿದೆ. ವಿಶೇಷವಾಗಿ ಬೀದರ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ವಾಸ್ತುಶಿಲ್ಪದ ಶ್ರೀಮಂತ ಪರಂಪರೆಯನ್ನು ಹೊಂದಿರುವ ಜಿಲ್ಲೆಯಾಗಿದೆ ಎಂದರು.
ಬೀದರ್ ವಿಶ್ವವಿದ್ಯಾಲಯವು ಈ ಭಾಗದ ಯುವಕರ ಆಶೋತ್ತರಗಳಿಗೆ ದಿಕ್ಕು ತೋರಿಸುವ ಹಾಗೂ ಜ್ಞಾನಾಧಾರಿತ ಅಭಿವೃದ್ಧಿಯ ಪ್ರಮುಖ ಕೇಂದ್ರವಾಗುವ ವಿಶ್ವಾಸವಿದೆ. ಇಂದು ವಿದ್ಯಾರ್ಥಿಗಳ ಮೊದಲನೆ ಅಧ್ಯಾಯ ಆರಂಭವಾಗಿದ್ದು, ತಮ್ಮ ಕುಟುಂಬ, ವಿಶ್ವವಿದ್ಯಾಲಯ, ರಾಜ್ಯ ಹಾಗೂ ದೇಶದ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಆಶಿಸಿದರು.--
ಚಿತ್ರ 12ಬಿಡಿಆರ್54:ಬೀದರ್ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದ ನಿಮಿತ್ತ ಶನಿವಾರ ಪದಕ ಪಡೆದ ವಿದ್ಯಾರ್ಥಿಗಳನ್ನುದ್ದೇಶಿಸಿ ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್ ಮಾತನಾಡಿದರು.