ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಈಗಿನಿಂದಲೇ ಗಮನ ನೀಡಬೇಕು

| Published : Oct 09 2024, 01:33 AM IST

ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಈಗಿನಿಂದಲೇ ಗಮನ ನೀಡಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಸ್ಪರ್ಧಾತ್ಮಕ ಜಗತ್ತಿನ ಎಲ್ಲ ಸವಾಲುಗಳನ್ನೂ ಸಹ ಸಮರ್ಥವಾಗಿ ಎದುರಿಸಿ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಈಗಿನಿಂದಲೇ ಗಮನ ನೀಡಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ಸ್ಪರ್ಧಾತ್ಮಕ ಜಗತ್ತಿನ ಎಲ್ಲ ಸವಾಲುಗಳನ್ನೂ ಸಹ ಸಮರ್ಥವಾಗಿ ಎದುರಿಸಿ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಈಗಿನಿಂದಲೇ ಗಮನ ನೀಡಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಅವರು ತಾಲೂಕಿನ ಮಲ್ಲಿಗಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಉಚಿತ ಶಿಕ್ಷಣ ಅಭಿಯಾನದ - 2 ಅಡಿಯಲ್ಲಿ ಕರ್ನಾಟಕ ಗೃಹ ಮಂಡಳಿ ಒಂದು ಕೋಟಿ ರು. ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಬದಲಾದ ಈ ದಿನಗಳಲ್ಲಿ ಪ್ರತಿ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಹೆಚ್ಚಿದೆ. ಪ್ರತಿಭೆ ಇದ್ದರೆ ಮಾತ್ರ ಅವಕಾಶ ಸಿಗಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಮೊದಲಾದ್ಯತೆ ನೀಡಬೇಕಿದೆ. ಸಮಯ ವ್ಯರ್ಥವಾಗಿ ಕಳೆಯದೇ ಓದಿನತ್ತ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕಿದೆ. ಗಳಿಸಿದ ಜ್ಞಾನ ಖಂಡಿತವಾಗಿಯೂ ಕೈ ಹಿಡಿಯಲಿದೆ ಎಂದು ಹೇಳಿದ ಅವರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಗ್ರಂಥಾಲಯ ನಿರ್ಮಿಸಲಾಗುತ್ತಿದ್ದು, ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.

ಹಾನಗಲ್ಲ ತಾಲೂಕಿನ ವಿದ್ಯಾರ್ಥಿಗಳು ಸಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ತೋರಬೇಕು ಎನ್ನುವ ಉದ್ದೇಶದಿಂದ ತರಬೇತಿ ಸಹ ನೀಡಲಾಗುತ್ತಿದೆ. ಐಎಎಸ್, ಕೆಎಎಸ್ ಸೇರಿದಂತೆ ಇನ್ನಿತರ ಎಲ್ಲ ಸರ್ಕಾರಿ ಹುದ್ದೆಗಳ ಪರೀಕ್ಷೆ ಎದುರಿಸಲು ನುರಿತ ತರಬೇತಿದಾರರಿಂದ ಕಳೆದ ಎರಡು ವರ್ಷಗಳಿಂದ ತರಬೇತಿ ದೊರಕಿಸಲಾಗುತ್ತಿದ್ದು, ತರಬೇತಿ ಪಡೆದ ವಿದ್ಯಾರ್ಥಿಗಳು ಅವಕಾಶ ಸಹ ಗಿಟ್ಟಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಕಾಳಜಿ ವಹಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಸದಸ್ಯ ಮಹೇಶ ಪವಾಡಿ, ಕಾಲೇಜು ಅಭಿವೃದ್ಧಿ ಸಲಹಾ ಸಮಿತಿ ಸದಸ್ಯರಾದ ಸಿಕಂದರ್ ವಾಲಿಕಾರ, ಫೈರೋಜ್ ಶಿರಬಡಗಿ, ಪ್ರಾಚಾರ್ಯ ಜಿ.ಎಸ್. ಕುಮ್ಮೂರ, ಕರ್ನಾಟಕ ಗೃಹ ಮಂಡಳಿಯ ಸಹಾಯಕ ಎಂಜಿನಿಯರ್ ಹುಸೇನಬಿ ಬಿ.ಕೆ. ಇದ್ದರು.