ವಿದ್ಯಾರ್ಥಿದೆಸೆಯಿಂದಲೇ ಪಠ್ಯದ ಕಡೆ ಗಮನಹರಿಸಬೇಕು: ಪ್ರವೀಣ್‌

| Published : Jan 05 2025, 01:31 AM IST

ಸಾರಾಂಶ

ಚಿಕ್ಕಮಗಳೂರು, ವಿದ್ಯಾರ್ಥಿದೆಸೆಯಿಂದಲೇ ಪಠ್ಯದ ಕಡೆ ಗಮನಹರಿಸಬೇಕು. ಓದಿನ ಸಮಯದಲ್ಲಿ ಕಾಲಹರಣ ಮಾಡದೇ ಶ್ರದ್ಧೆಯಿಂದ ವಿದ್ಯಾಭ್ಯಾಸ ಹಾಗೂ ಕ್ರೀಡಾಕೂಟದಲ್ಲಿ ತೊಡಗಿಕೊಂಡರೆ ಭವಿಷ್ಯದಲ್ಲಿ ಸಾಧನೆ ಮೆಟ್ಟಿಲೇರಲು ಸಾಧ್ಯ ಎಂದು ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ಕೆ.ಎನ್. ಪ್ರವೀಣ್ ಹೇಳಿದರು.

ಬಿಜಿಎಸ್‌ ಕ್ಯಾಂಪಸ್‌ನಲ್ಲಿ ಚುಂಚೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿದ್ಯಾರ್ಥಿದೆಸೆಯಿಂದಲೇ ಪಠ್ಯದ ಕಡೆ ಗಮನಹರಿಸಬೇಕು. ಓದಿನ ಸಮಯದಲ್ಲಿ ಕಾಲಹರಣ ಮಾಡದೇ ಶ್ರದ್ಧೆಯಿಂದ ವಿದ್ಯಾಭ್ಯಾಸ ಹಾಗೂ ಕ್ರೀಡಾಕೂಟದಲ್ಲಿ ತೊಡಗಿಕೊಂಡರೆ ಭವಿಷ್ಯದಲ್ಲಿ ಸಾಧನೆ ಮೆಟ್ಟಿಲೇರಲು ಸಾಧ್ಯ ಎಂದು ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ಕೆ.ಎನ್. ಪ್ರವೀಣ್ ಹೇಳಿದರು.ಶ್ರೀ ಆದಿಚುಂಚನಗಿರಿ ಟ್ರಸ್ಟ್‌ನ ಶ್ರೀ ಮಂಜುನಾಥ ವಿದ್ಯಾ ಕೇಂದ್ರ, ಶ್ರೀ ಆದಿಚುಂಚನಗಿರಿ ಪ್ರೌಢಶಾಲೆ ಮತ್ತು ಬಿಜಿಎಸ್ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಗರದ ಹೌಸಿಂಗ್‌ ಬೋರ್ಡ್‌ನಲ್ಲಿ ಶುಕ್ರವಾರ ನಡೆದ ಚುಂಚೋತ್ಸವ ಉದ್ಘಾಟಿಸಿ ಮಾತನಾಡಿದರು. ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಕಲಿಕೆ ಮೊದಲ ಮೆಟ್ಟಿಲಾಗಿರುತ್ತದೆ. ವಿದ್ಯಾರ್ಥಿಗಳು ಅವರಿವರ ಮಾತುಗಳನ್ನು ಆಲಿಸದೇ ಕಲಿಕೆ ಹಾಗೂ ಆಸಕ್ತಿ ಹೊಂದಿರುವ ಪಠ್ಯಕ್ಕೆ ಮೊದಲ ಆದ್ಯತೆ ಕೊಟ್ಟು ಅಭ್ಯಾಸಿಸಿದರೆ ಮಾತ್ರ ನಿಗಧಿತ ಗುರಿ ತಲುಪಲು ಸಾಧ್ಯವಾಗಲಿದೆ ಎಂದು ತಿಳಿಸಿದರು.ನಗರಸಭಾ ಸದಸ್ಯೆ ಕವಿತಾ ಶೇಖರ್ ಮಾತನಾಡಿ, ಪ್ರಾಥಮಿಕ ಶಾಲೆ ದಾಟಿ ಪ್ರೌಢ ಹಾಗೂ ಕಾಲೇಜು ಮೆಟ್ಟಿಲು ಹತ್ತುವ ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶೀಲರಾಗಿರಬೇಕು. ಓದಿನಲ್ಲಿ ಹಿಂದೇಟು ಹಾಕದೇ ವಿನಯದಿಂದ ಶ್ರಮವಹಿಸಿದರೆ ಮಾತ್ರ ಪಾಲಕರ ಹಾಗೂ ಶಾಲೆ ಶಿಕ್ಷಕರ ಶ್ರಮಕ್ಕೆ ಪ್ರತಿಫಲ ಸಿಗಲಿದೆ ಎಂದು ಹೇಳಿದರು.ಇತೀಚೆಗೆ ಆನ್‌ಲೈನ್ ಆಟಗಳು ಹೆಚ್ಚಾಗಿರುವ ಕಾರಣ ಓದಿನಲ್ಲಿ ವಿದ್ಯಾರ್ಥಿಗಳಲ್ಲಿ ಹಿನ್ನೆಡೆ ಆಗುತ್ತಿರುವುದು ಕಾಣುತ್ತಿದ್ದೇವೆ. ಓದುವ ವಯಸ್ಸಿನಲ್ಲಿ ಹೆಚ್ಚು ಮೊಬೈಲ್ ಅಥವಾ ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಜೀವನಪೂರ್ತಿ ಮರೆಯ ಲಾರದಂಥ ಸಂಕಷ್ಟಗಳು ಎದುರಾಗುವ ಸಂಭವವಿದ್ದು, ಇವುಗಳಿಗೆ ಆಸ್ಪದ ನೀಡದೇ ಓದಿನ ಕಡೆ ಗಮನಹರಿಸಬೇಕು ಎಂದರು.ಶಿಕ್ಷಣ ಸಂಯೋಜಕ ಕೃಷ್ಣಮೂರ್ತಿ ರಾಜ್ ಅರಸ್ ಮಾತನಾಡಿ, ವ್ಯಾಸಂಗದಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣ ರಾದವರು, ಕೆಲವೊಮ್ಮೆ ಜೀವನವೆಂಬ ಬದುಕಿನಲ್ಲಿ ಸೋಲುಂಡಿದ್ದಾರೆ. ಅದೇ ಕೊನೆ ಬೆಂಚ್‌ನ ವಿದ್ಯಾರ್ಥಿಗಳು ಓದಿನಲ್ಲಿ ಹಿನ್ನೆಡೆ ಹೊಂದಿದ್ದರೆ, ಜೀವನದಲ್ಲಿ ಮುನ್ನೆಡೆ ಸಾಧಿಸಿರುವುದು ನೋಡಿದ್ದೇವೆ. ವಿದ್ಯಾ ರ್ಥಿಗಳು ಧೃತಿಗೆಡದೇ ಕಲಿಕೆಯಲ್ಲಿ ತೊಡಗಬೇಕು ಎಂದು ಹೇಳಿದರು.ಇದೇ ವೇಳೆ ವಿವಿಧ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಜೆ.ಜಿ.ಸುರೇಂದ್ರ ವಹಿಸಿದ್ದರು. ಆದಿಚುಂಚನಗಿರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಆರ್.ಚಂದ್ರಶೇಖರ್ ಉಪಸ್ಥಿತರಿದ್ದರು.

3 ಕೆಸಿಕೆಎಂ 3ಚಿಕ್ಕಮಗಳೂರಿನ ಹೌಸಿಂಗ್‌ ಬೋರ್ಡ್‌ನ ಬಿಜಿಎಸ್‌ ಕ್ಯಾಂಪಸ್‌ನಲ್ಲಿ ಶುಕ್ರವಾರ ನಡೆದ ಚುಂಚೋತ್ಸವ ಕಾರ್ಯಕ್ರಮವನ್ನು ಕೆ.ಎನ್‌. ಪ್ರವೀಣ್‌ ಉದ್ಘಾಟಿಸಿದರು. ಪ್ರಾಂಶುಪಾಲ ಜೆ.ಬಿ. ಸುರೇಂದ್ರ, ಶಿಕ್ಷಣ ಸಂಯೋಜಕ ಕೃಷ್ಣಮೂರ್ತಿ ರಾಜ್ ಅರಸ್, ಜಿ.ಆರ್‌. ಚಂದ್ರಶೇಖರ್‌ ಇದ್ದರು.