ಸಾರಾಂಶ
ಜೋಯಿಡಾ: ಜೀವನದಲ್ಲಿ ಪ್ರತಿಯೊಬ್ಬರಿಗೂ ಗುರಿ ಅತೀ ಮುಖ್ಯ. ವಿದ್ಯಾರ್ಥಿಗಳು ಗುರಿಗೆ ತಕ್ಕಂತೆ ಸರಿಯಾದ ಮಾರ್ಗ ಅನುಸರಿಸಿದರೆ ಯಶಸ್ಸು ಸಾಧ್ಯ ಎಂದು ಬೆಳಗಾವಿಯ ಎಸ್.ವಿ.ಜಿ. ಮಹೇಶ ಕಾಲೇಜಿನ ಸಮೂಹ ಸಂಸ್ಥೆಗಳ ನಿರ್ದೇಶಕ ಪ್ರಾಂಶುಪಾಲ ಮಂಜುನಾಥ ವಿ. ಭಟ್ ಹೇಳಿದರು.
ಅವರು ಸಂಜೀವನಿ ಸೇವಾ ಟ್ರಸ್ಟ್ ಜೋಯಿಡಾ, ಕ್ರೂಗರ ಫೌಂಡೇಶನ್ ಕಾರವಾರ ಹಾಗೂ ಬಿಜಿವಿಎಸ್ ಪದವಿ ಪೂರ್ವ ಕಾಲೇಜು ಜೋಯಿಡಾ ಇವುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಮಧ್ಯಾಹ್ನ ಜೋಯಿಡಾದಲ್ಲಿ ವಿದ್ಯಾರ್ಥಿಗಳಿಗೆ "ಪಿಯುಸಿ ನಂತರ ಏನು " ಎಂಬ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ಶಿಕ್ಷಣವನ್ನು ಜ್ಞಾನಾರ್ಜನೆಗಾಗಿ ಬಳಸಿಕೊಂಡು, ಪರೀಕ್ಷೆ ಎಂಬ ಸವಾಲನ್ನು ಯಶಸ್ವಿಯಾಗಿ ಎದುರಿಸುವಂತಾಗಬೇಕು. ಅದನ್ನು ಬಿಟ್ಟು ಕೆಲವು ವಿದ್ಯಾರ್ಥಿಗಳು ಹೆದರಿ ಜೀವ ಹಾನಿ ಮಾಡಿಕೊಳ್ಳುವ ಹುಚ್ಚು ನಿರ್ಧಾರ ಮಾಡುತ್ತಾರೆ. ಅದು ಸರಿಯಲ್ಲ. ಪಿಯುಸಿ ನಂತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ, ವೃತ್ತಿಪರ ಶಿಕ್ಷಣ, ಇತರೆ ಶೈಕ್ಷಣಿಕ ಅವಕಾಶಗಳು, ಉದ್ಯೋಗಾವಕಾಶ ಮತ್ತು ಇತರೆ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಉದಾಹರಣೆ ಸಮೇತ ವಿವರಿಸಿದರು.
ಮುಖ್ಯ ಅತಿಥಿಯಾದ ಬೆಳಗಾವಿಯ ಪ್ರಾಧ್ಯಾಪಕ ಉಮಾಪತಿ ಹೀರೆಮಠ ಪಿಯುಸಿಯ ನಂತರ ವಿದ್ಯಾರ್ಥಿಗಳಿಗೆ ಇರುವ ವಿವಿಧ ಅವಕಾಶಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಬಿಜಿವಿಎಸ್ ಪದವಿ ಪೂರ್ವ ಕಾಲೇಜು ಜೋಯಿಡಾ ಪ್ರಾಂಶುಪಾಲ ಮಂಜುನಾಥ ಶೆಟ್ಟಿ, ಪ್ರಾಧ್ಯಾಪಕರಾದ ಪ್ರಕಾಶ ತಗಡಿನಮನೆ, ಪಾಂಡುರಂಗ ಪಟಗಾರ, ಕಾಲೇಜಿನ ಸ್ಥಳೀಯ ಅಭಿವೃದ್ಧಿ ಸಮಿತಿ ಸದಸ್ಯ ಸಮೀರ ಮುಜಾವರ, ಕಾಳಿ ಬ್ರಿಗೇಡ್, ಮಾಜಿ ಕಾರ್ಯದರ್ಶಿ ಪ್ರಭಾಕರ ನಾಯ್ಕ, ಸಂಜೀವನಿ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ರವಿ ರೇಡಕರ, ಸುನೀಲ ದೇಸಾಯಿ, ಜಯಂತ ಗಾವಡಾ, ಗಣೇಶ ವಿರಕ್ತಿಮಠ, ಈಶ್ವರಿ ದೇಸಾಯಿ, ಶ್ರೀಪಾದ ಆಚಾರಿ, ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದರು.