ವಿದ್ಯಾರ್ಥಿಗಳು ಸಿಜಿಪಿಎ ಕಡಿಮೆ ಇದ್ರೂ ಧೈರ್ಯಗೆಡಬಾರದು: ಡಿಸಿ ದಿವಾಕರ

| Published : Jun 03 2024, 12:31 AM IST

ವಿದ್ಯಾರ್ಥಿಗಳು ಸಿಜಿಪಿಎ ಕಡಿಮೆ ಇದ್ರೂ ಧೈರ್ಯಗೆಡಬಾರದು: ಡಿಸಿ ದಿವಾಕರ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳಿಗೆ ಓದಿನ ಗುಂಗು ಇರಬೇಕೇ ವಿನಃ ಬೇರೆ ಚಿಂತೆಗಳಲ್ಲಿ ತೊಡಗಬಾರದು.

ಹೊಸಪೇಟೆ: ವಿದ್ಯಾರ್ಥಿಗಳು ಸಿಜಿಪಿಎ (ಕ್ಯುಮಿಲೇಟಿವ್ ಗ್ರೇಡ್ ಪಾಯಿಂಟ್ ಆವರೇಜ್) ಕಡಿಮೆ ಇದ್ದರೂ ಧೈರ್ಯಗೆಡಬಾರದು, ಸಿಜಿಪಿಎ ಒಂದೇ ಅವರ ಯಶಸ್ಸಿಗೆ ಕಾರಣ ಅಲ್ಲ. ಕಠಿಣ ಪರಿಶ್ರಮವೇ ವಿದ್ಯಾರ್ಥಿಗಳ ಭವಿಷ್ಯದ ದಿಕ್ಸೂಚಿ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.

ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಿಂಚನ 2024 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಓದಿನ ಗುಂಗು ಇರಬೇಕೇ ವಿನಃ ಬೇರೆ ಚಿಂತೆಗಳಲ್ಲಿ ತೊಡಗಬಾರದು. ಪದವಿ ಎಂಬುದು ಅವರ ಜೀವನದ ಬುನಾದಿ, ನಂತರ ಪಡುವ ಕಠಿಣ ಪರಿಶ್ರಮ ಅವರ ಜೀವನದ ದಿಕ್ಕನ್ನೇ ಬದಲಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಇಚ್ಛೆಗೆ ಅನುಸಾರವಾಗಿ ಭವಿಷ್ಯದ ದಾರಿ ಕಂಡುಕೊಳ್ಳಬೇಕು. ವಿದ್ಯಾರ್ಥಿಗಳು ತಮಗೆ ರಾಜಕೀಯ ಬಲವಿಲ್ಲ, ಮನೆಯಲ್ಲಿ ಶಿಕ್ಷಣದ ವಾತಾವರಣವಿಲ್ಲ, ಆರ್ಥಿಕವಾಗಿ ದುರ್ಬಲತೆ ಇದೆ, ಸರ್ಕಾರಿ ನೌಕರಿ ವ್ಯವಸ್ಥೆ ಇಲ್ಲ ಎಂದು ಮರುಗದೇ ಸತ್ಯ ಮತ್ತು ಭ್ರಮೆಗಳ ಬಗ್ಗೆ ಸರಿಯಾಗಿ ಅರಿತುಕೊಂಡು ಜ್ಞಾನಾರ್ಜನೆಗೆ ಒತ್ತು ಕೊಡಬೇಕು. ಕಠಿಣ ಪರಿಶ್ರಮಕ್ಕೆ ಮತ್ತೊಂದು ಪರ್ಯಾಯವಿಲ್ಲ ಎಂದರು.

ಜೆಎಸ್‌ಡಬ್ಲೂ ತೋರಣಗಲ್ಲಿನ ಕಾರ್ಯಕಾರಿ ಉಪಾಧ್ಯಕ್ಷ ಎಸ್.ಸಿ. ವಿಶ್ವನಾಥ, ಸಮುತ್ಕರ್ಷ ಟ್ರಸ್ಟ್‌ನ ಮಹಾ ನಿರ್ದೇಶಕ ಜಿತೇಂದ್ರ ಪಿ.ನಾಯಕ್ಮಾ, ವೀ.ವಿ. ಸಂಘದ ಕಾರ್ಯದರ್ಶಿ ಡಾ.ಅರವಿಂದ್ ಪಟೇಲ್‌, ಪಿಡಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಕರಿಬಸವರಾಜ ಬಾದಾಮಿ, ವೀ.ವಿ. ಸಂಘದ ಕೋಶಾಧಿಕಾರಿ ಬೈಲುವದ್ದಿಗೇರಿ ಯರಿಸ್ವಾಮಿ ಮಾತನಾಡಿದರು.

ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್ ಅಧ್ಯಕ್ಷತೆವಹಿಸಿದ್ದರು.

ಎಂ.ಎಸ್.ಪಿ.ಎಲ್. ಉಪಾಧ್ಯಕ್ಷ ನಾಗರಾಜ್ ಅವರು ಆರು ವಿಭಾಗದ ಪ್ರತಿಭಾವಂತ ಟಾಪರ್ಸ್‌ಗಳಾದ ಮ್ಯೆಕಾನಿಕಲ್ ವಿಭಾಗದ ಎ.ಪವನಕುಮಾರ್ ರಾಜು, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಆಕಾಶ್ ಉಪ್ಪಿನ್, ಗಣಕಯಂತ್ರ ವಿಭಾಗದ ಅಫ್ರೀನ್ ಎಚ್., ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮೊಹಮ್ಮದ್ ಮುಸ್ತಫಾ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಮೋಮೀನಾ ಕೌಸರ್, ಎಂಬಿಎ ವಿಭಾಗದ ಸುಹಾಸಿ ಎಸ್. ಭಾಟಿಯಾ ಎಂಬ ವಿದ್ಯಾರ್ಥಿಗಳಿಗೆ ಎಂ.ಎಸ್.ಪಿ.ಎಲ್. ಸಂಸ್ಥೆಯಿಂದ ಪ್ರಾಯೋಜಿತ ಚಿನ್ನದ ಪದಕಗಳನ್ನು ನೀಡಿ ಪುರಸ್ಕರಿಸಿದರು.

ಪ್ರಾಂಶುಪಾಲ ಡಾ. ಯು.ಎಂ. ರೋಹಿತ್ ಕಾಲೇಜಿನ ವಾರ್ಷಿಕ ವರದಿಯನ್ನು ಪ್ರಸ್ತುತಗೊಳಿಸಿದರು. ವೀ.ವಿ. ಸಂಘದಿಂದ ಎಲ್ಲ ವಿಭಾಗದ ಅತ್ಯಂತ ಹೆಚ್ಚು ಶ್ರೇಣಿಯಲ್ಲಿ ಉತ್ತೀರ್ಣಗೊಂಡ 6 ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರ ರುಪಾಯಿ ಮೊತ್ತದ ನಗದು ಬಹುಮಾನವನ್ನು ಹಾಗೂ ಇತರ ದತ್ತಿ ಬಹುಮಾನಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಡಾಕ್ಟರೇಟ್ ಪಡೆದ ಕಾಲೇಜಿನ ಐವರು ಉಪನ್ಯಾಸಕರಾದ ಡಾ. ನವೀನ್.ಆರ್.ಗಣೇಶ್, ಡಾ.ವೇಣುಮಾಧವ ಎಂ., ಡಾ.ವಸಂತಮ್ಮ, ಡಾ.ಕೆ.ಎಚ್. ಮಂಜುನಾಥ, ಡಾ.ಗಿರಿಜಾ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ವೀ.ವಿ. ಸಂಘದ ಉಪಾಧ್ಯಕ್ಷ ಜಾನೆಕುಂಟೆ ಬಸವರಾಜ್, ವೀ.ವಿ. ಸಂಘದ ಕಾರ್ಯಕಾರಿಣಿ ಮಂಡಳಿ ಸದಸ್ಯರಾದ ಎಂ.ಶರಣ ಬಸವನಗೌಡ ಹಾಗೂ ಮೆಟ್ರಿ ಮಲ್ಲಿಕಾರ್ಜುನ, ಸಿ.ಎನ್. ಮೋಹನ್ ರೆಡ್ಡಿ, ದರೂರ್ ಶಾಂತನಗೌಡ, ಎಳುಬೆಂಚಿ ರಾಜಶೇಖರ, ಪಲ್ಲೇದ ಪ್ರಭುಲಿಂಗ, ಕೆ.ಬಿ. ಶ್ರೀನಿವಾಸ್‌, ಉಪಪ್ರಾಂಶುಪಾಲೆ ಪ್ರೊ.ಪಾರ್ವತಿ ಕಡ್ಲಿ ಇದ್ದರು.