ವಿಭಾಗ ಮಟ್ಟದ ಕಾಲೇಜು ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಡಾ. ಲಕ್ಷ್ಮಣ್ ದಾಸ್ ಸಲಹೆ
ಕನ್ನಡಪ್ರಭ ವಾರ್ತೆ ತುಮಕೂರುಇಂದಿನ ಕಾಲಘಟ್ಟದ ವಿದ್ಯಾರ್ಥಿಗಳು ಮೊಬೈಲ್ ದಾಸತ್ಯಕ್ಕೆ ಒಳಗಾಗದೆ ರಾಮಾಯಣ, ಮಹಾಭಾರತದ ಮಹಾಕಾವ್ಯಗಳಲ್ಲಿನ ಸಾರವನ್ನು ಅರಿತು ಮುನ್ನಡೆದರೆ ಯಶಸ್ಸಿನ ಗುರಿ ತಲುಪಬಹುದು ಎಂದು ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ರಂಗಭೂಮಿ ಕಲಾವಿದ, ಹರಿಕಥಾ ವಿದ್ವಾನ್ ಡಾ. ಲಕ್ಷ್ಮಣ್ ದಾಸ್ ಅವರು ಕರೆ ನೀಡಿದರು.ಟೌನ್ ಹಾಲ್ ಬಳಿ ಬಿ.ಎಚ್. ರಸ್ತೆಯಲ್ಲಿರುವ ಅನನ್ಯ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಅನನ್ಯ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಸಹಯೋಗದೊಂದಿಗೆ ಆಯೋಜಿಸಿದ್ದ ವಿಭಾಗ ಮಟ್ಟದ ಕಾಲೇಜು ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ತಾಂತ್ರಿಕವಾಗಿ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿ ಇಂದಿನ ಯುವ ಪೀಳಿಗೆಯು ನಾಡು, ನುಡಿ, ಕಲೆ, ನಾಟಕ ರಂಗಭೂಮಿ, ಸೇರಿದಂತೆ ಇತರೆ ಸಂಸ್ಕೃತಿಗಳ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ ಕಾಲೇಜು ವಿದ್ಯಾರ್ಥಿಗಳು ಶಿಕ್ಷಣದ ನೆಪದಲ್ಲಿ ಮೊಬೈಲ್ ದಾಸರಾಗಿ ಕೆಟ್ಟ ದಾರಿ ಹಿಡಿಯುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಗುಬ್ಬಿ ವೀರಣ್ಣ, ಡಾ ರಾಜಕುಮಾರ್, ಕಾಮಿಡಿ ಖ್ಯಾತಿ ನರಸಿಂಹರಾಜು, ಮಂಜುಳಾ ಸೇರಿದಂತೆ ಅನೇಕ ಕಲಾವಿದರು ಯಾವುದೇ ಶಿಕ್ಷಣ ಪಡೆಯದಿದ್ದರೂ ಕಲಾ ಕ್ಷೇತ್ರದಲ್ಲಿ ಮಹೋನ್ನತವಾದ ಸಾಧನೆಯನ್ನ ಮಾಡಿದ್ದಾರೆ. ಇದನ್ನೇ ಪ್ರೇರಣೆಯಾಗಿ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಜೊತೆಗೆ ಕಲೆ ಸಂಗೀತ ನಾಟಕದ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ಬಿ. ನೀಲಮ್ಮ ಮಾತನಾಡಿ, ರಾಜ್ಯಾದ್ಯಂತ ನಾಟಕ ಅಕಾಡೆಮಿಯು ವಿದ್ಯಾರ್ಥಿ ರಂಗಭೂಮಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ರಂಗ ತರಭೇತಿ ಕಾರ್ಯಾಗಾರ ನಡೆಸುತ್ತಾ ಕಾಲೇಜು ನಾಟಕೋತ್ಸವಗಳನ್ನು ಏರ್ಪಡಿಸುತ್ತಾ ಬಂದಿದೆ. ಶೈಕ್ಷಣಿಕ ಆಯಾಮದಿಂದಲೇ ಉದ್ಯೋಗ ದೊರೆಯುತ್ತದೆ ಎಂಬ ಭಾವನೆಯನ್ನು ಬಿಟ್ಟು ರಂಗಭೂಮಿ ಸಂಗೀತ ಕಲೆಯಲ್ಲಿ ತೊಡಗಿಸಿಕೊಂಡಾಗ ಯಶಸ್ಸಿನ ಜೀವನವನ್ನು ಇಲ್ಲಿಯೂ ರೂಢಿಸಿಕೊಳ್ಳಬಹುದಾಗಿದ್ದು, ಜೊತೆಗೆ ಮಾನಸಿಕವಾಗಿ ಸಮಸ್ಯೆಗಳನ್ನು ಹಿಮ್ಮೆಟ್ಟಿಸುವ ಧೈರ್ಯವನ್ನು ಬೆಳೆಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.ರಾಜ್ಯ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಅವರು ಮಾತನಾಡಿ, ಇಂದಿನ ಯುವ ಪೀಳಿಗೆ ದೇಶದ ಆಸ್ತಿಯಾಗಿದೆ. ತಂತ್ರಜ್ಞಾನ ಮತ್ತು ಡ್ರಗ್ಸ್ ಪಿಡುಗುಗಳು ಯುವ ಜನತೆಯನ್ನ ಹಾಳು ಮಾಡುತ್ತಿದ್ದು ಮೂಲ ರಾಮಾಯಣದಿಂದ ವಿವಿಧ ಆಯಾಮದಲ್ಲಿ ರೂಪುಗೊಂಡಿರುವ ರಾಮಾಯಣದ ಸಾರಾಂಶವವು ಯುವ ಜನರಿಗೆ ದಿವ್ಯ ಔಷಧಿಯಾಗಿದ್ದು, ಯುವಕರು ಇದನ್ನ ಅರ್ಥೈಸಿಕೊಂಡು ಮುನ್ನಡೆಯಬೇಕಿದೆ ಎಂದರು.ಪತ್ರಕರ್ತ ರವಿಕುಮಾರ್ ಸಿ.ಎಚ್. ಮಾತನಾಡಿ, ಭಾವನಾತ್ಮಕವಾಗಿ ಉಳಿದಿರುವ ರಂಗಭೂಮಿ ಕಲೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಾಗ ಮಾನಸಿಕವಾಗಿ ಓದಿನ ಕಡೆ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತದೆ. ರಾಜಕುಮಾರ್ ಗುಬ್ಬಿ ವೀರಣ್ಣ ಸೇರಿದಂತೆ ಇತರರು ಯಾವುದೇ ಪದವಿ ಪಡೆಯದೇ ರಂಗಭೂಮಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಯುವ ಸಮೂಹವನ್ನು ಕಾಡುತ್ತಿರುವ ಇಂದಿನ ಸಮಸ್ಯೆಗಳಿಗೆ ಸಾಮಾಜಿಕ ಜಾಲತಾಣವು ಎಲ್ಲದಕ್ಕೂ ಉತ್ತರವಾಗದು ಹಾಗಾಗಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ನಾಟಕಭಿನಯ, ಸಂಗೀತ, ಕಲೆ ಸೇರಿದಂತೆ ಇತರೆ ಕ್ಷೇತ್ರಗಳನ್ನು ಆಕರ್ಷಿಸಬೇಕಾಗಿದೆ ಎಂದು ತಿಳಿಸಿದರು.ನಾಟಕೋತ್ಸವ ಸಂಚಾಲಕರಾದ ರವೀಂದ್ರನಾಥ್ ಮಾತನಾಡಿ, ನಾಟಕ ಅಕಾಡೆಮಿಯು ಎಲ್ಲಾ ಬಗ್ಗೆಯ ಕಲೆಗಳನ್ನು ಪ್ರೋತ್ಸಾಹಿಸುತ್ತದೆ. ವಿದ್ಯಾರ್ಥಿಗಳು ಅಧ್ಯಯನ ಹಂತದಲ್ಲಿ ಕಲೆಯನ್ನು ಕರಗತ ಮಾಡಿಕೊಂಡರೆ ಯಶಸ್ಸಿನ ಜೀವನ ನಡೆಸಬಹುದಾಗಿದೆ ಎಂದರು.ಇದೇ ಸಂದರ್ಭದಲ್ಲಿ ಅಭ್ಯುದಯ ಕಲಾತಂಡ ಪ್ರಸ್ತುತಪಡಿಸಿದ ದಿನೇಶ್ ನಾಯಕ್ ಅವರ ನಿರ್ದೇಶನದ ಮಹಾಭಾರತದ ಕಾದಂಬರಿ ಆಧಾರಿತ ರಾಧೆಯ ನಾಟಕ, ಕುವೆಂಪು ಅವರು ರಚಿಸಿದ ಅನನ್ಯ ಕಲಾತಂಡ ಅವರು ಅಭಿನಯಿಸಿದ ವೈ ಎಂ ಹೇಮಂತ್ ಅವರ ನಿರ್ದೇಶನದಲ್ಲಿ ವಾಲಿವಧೆ ಎಂಬ ನಾಟಕವನ್ನು ಪ್ರದರ್ಶಿಸಲಾಯಿತು.ಈ ಸಂದರ್ಭದಲ್ಲಿ ಅನನ್ಯ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಟ್ರಸ್ಟಿಗಳಾದ ಡಾ. ಹರೀಶ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂಚಾಲಕರಾದ ರವೀಂದ್ರನಾಥ್, ರಂಗ ಸಂಘಟಕರಾದ ಕಾಂತರಾಜು ಕೌತಮಾರನಹಳ್ಳಿ ಉಪಸ್ಥಿತರಿದ್ದರು.