ಸೋಲೇ ಗೆಲುವಿನ ಮೊದಲು ಮೆಟ್ಟಿಲು ಆದ್ದರಿಂದ ಸ್ಪರ್ಧೆಯಲ್ಲಿ ಭಾಗುವಹಿಸುವದು ಮುಖ್ಯ. ಸೋಲು ಗೆಲುವುಗಳನ್ನು ಸಮನಾವಾಗಿ ಸ್ವೀಕರಿಸಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಬಿ. ಮಂಜಮ್ಮ‌ ಜೋಗತಿ ಅಭಿಪ್ರಾಯ ವ್ಯಕ್ತಪಡಿಸಿದರು

ಧಾರವಾಡ: ಸೋಲೇ ಗೆಲುವಿನ ಮೊದಲು ಮೆಟ್ಟಿಲು ಆದ್ದರಿಂದ ಸ್ಪರ್ಧೆಯಲ್ಲಿ ಭಾಗುವಹಿಸುವದು ಮುಖ್ಯ. ಸೋಲು ಗೆಲುವುಗಳನ್ನು ಸಮನಾವಾಗಿ ಸ್ವೀಕರಿಸಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಬಿ. ಮಂಜಮ್ಮ‌ ಜೋಗತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕವಿವಿ ಸ್ನಾತಕೋತ್ತರ ಜಿಮಖಾನಾದ ಸಹಯೋಗದಲ್ಲಿ ಆಯೋಜಿಸಿದ್ದ ಕವಿವಿ ವ್ಯಾಪ್ತಿಯ ಅಂತರ ವಲಯ ಯುವಜನೋತ್ಸವದ‌ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಸಮಯಕ್ಕೆ ಗೌರವ ನೀಡಬೇಕು. ಪ್ರಜ್ಞಾವಂತರಾಗಿ ಸಾಧನೆ ಮಾಡಲು ಪ್ರಯತ್ನಿಸಬೇಕು. ಜೋಗತಿ ನೃತ್ಯ ಕಲೆಯು ನನಗೆ ಸಮಾಜದಲ್ಲಿ ಬದುಕು ಕಟ್ಟಿಕೊಟ್ಟಿದೆ. ನಾವು ಮಾಡುವ ಕಾಯಕವನ್ನು ‌ಭಕ್ತಿ ಮತ್ತು ಪ್ರೀತಿಯಿಂದ ಗೌರವಿಸಬೇಕು. ಅಂದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳು ಮೊಬೈಲ್ ಬಳಕೆ ನಿಯಮಿತವಾಗಿರುವುದರ ಜೊತೆಗೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ದುಶ್ಚಟಗಳಿಗೆ ದಾಸರಾಗದೆ ಲಿಂಗ ತಾರತಮ್ಯ ಭಾವನೆಯಿಂದ ಹೊರಬರಬೇಕು ಎಂದು ಹೇಳಿದರು.

ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಮಾತನಾಡಿ, ಕಷ್ಟಪಟ್ಟು ಅಧ್ಯಯನ ಮಾಡಿ ಗುರಿಯೊಂದಿಗೆ ಸಾಧನೆ ಮಾಡಲು ಪ್ರಯತ್ನಿಸಿ. ಸಮಾಜಕ್ಕೆ ಉತ್ತಮ ಪ್ರಜೆಯಾಗಿರಿ ಎಂದರು.

ಕಾರ್ಯಕ್ರಮದಲ್ಲಿ ಅಂತರ ವಲಯ ಮಟ್ಟದ ಯುವಜನೋತ್ಸವದ ಕುರಿತು ಕವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹೊರತಂದ ವಿದ್ಯಾ ಸಮಾಚಾರ ವಿಶೇಷ ಸಂಚಿಕೆಯನ್ನು ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಬಿಡುಗಡೆ ಮಾಡಿದರು.

ಜಿಮಖಾನಾದ ಅಧ್ಯಕ್ಷರಾದ ಡಾ. ಮನೋಜ ಡೊಳ್ಳಿ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ. ಎಸ್.ಕೆ. ಪವಾರ, ಜಿಮಖಾನಾದ ಉಪಾಧ್ಯಕ್ಷರಾದ ಡಾ. ಪ್ರಶಾಂತ ಎಚ್.ವೈ., ಕಿರಣಕುಮಾರ ಬನ್ನಿಗೋಳ, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಮಹ್ಮದ ವಾಲೀಕಾರ, ಭೂಮಿ ಪತ್ತಾರ ಮತ್ತಿತರರು ಇದ್ದರು.