ಮಕ್ಕಳು ವಿದ್ಯಾರ್ಥಿ ಜೀವನದಲ್ಲೇ ದುಶ್ಚಟಗಳಿಗೆ ದಾಸರಾಗಿ ತಮ್ಮ ಭವಿಷ್ಯವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಿಗಿಂತಲೂ ವಿದ್ಯಾರ್ಥಿನಿಯರೇ ನಾಲ್ಕು ಪಟ್ಟು ಹೆಚ್ಚು ಚಟಕ್ಕೆ ದಾಸರಾಗುತ್ತಿರುವುದನ್ನು ಮಹಾನಗರಗಳಲ್ಲಿ ಕಾಣುತ್ತಿದ್ದೇವೆ.
ಮಾದಕ ವಸ್ತು ಮುಕ್ತ ಕರ್ನಾಟಕ (ಆಪರೇಶನ್ ರೈಸ್) ಕಾರ್ಯಕ್ರಮ ಉದ್ಘಾಟಿಸಿದ ಶಾಸಕ
ಕನ್ನಡಪ್ರಭ ವಾರ್ತೆ ಯಲ್ಲಾಪುರಮಕ್ಕಳು ವಿದ್ಯಾರ್ಥಿ ಜೀವನದಲ್ಲೇ ದುಶ್ಚಟಗಳಿಗೆ ದಾಸರಾಗಿ ತಮ್ಮ ಭವಿಷ್ಯವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಿಗಿಂತಲೂ ವಿದ್ಯಾರ್ಥಿನಿಯರೇ ನಾಲ್ಕು ಪಟ್ಟು ಹೆಚ್ಚು ಚಟಕ್ಕೆ ದಾಸರಾಗುತ್ತಿರುವುದನ್ನು ಮಹಾನಗರಗಳಲ್ಲಿ ಕಾಣುತ್ತಿದ್ದೇವೆ. ಆ ದೃಷ್ಟಿಯಿಂದ ರಾಜ್ಯಸರ್ಕಾರ ಡ್ರಗ್ ಮುಕ್ತ ಕರ್ನಾಟಕ ಮಾಡಲು ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಸೋಮವಾರ ಪಟ್ಟಣದ ಕಾರ್ಮಿಕ ಭವನದಲ್ಲಿ ಆರೋಗ್ಯ, ಕಂದಾಯ, ಶಿಕ್ಷಣ ಇಲಾಖೆಗಳ ಸಹಕಾರದಲ್ಲಿ ಮಾದಕ ವಸ್ತು ಮುಕ್ತ ಕರ್ನಾಟಕ (ಆಪರೇಶನ್ ರೈಸ್) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬ ಪಾಲಕರೂ ತಮ್ಮ ಮಕ್ಕಳು ಒಳ್ಳೆಯ ನಾಗರಿಕರಾಗಬೇಕು, ಶ್ರೇಷ್ಟ ಉದ್ಯೋಗವಂತರಾಗಬೇಕು ಎಂಬ ನೆಲೆಯಲ್ಲಿ ಸಾಕಷ್ಟು ಹಣ ವೆಚ್ಚ ಮಾಡಿ ಬೇರೆ ಬೇರೆ ನಗರಗಳಿಗೆ ವಿವಿಧ ಪದವಿಗಳಿಗಾಗಿ ಕಳಿಸುತ್ತಾರೆ. ಆದರೆ ಅಲ್ಲಿ ನೀವು ಸ್ನೇಹದ ಕಡಲಲ್ಲಿ ಮುಳುಗಿ ಚಟಕ್ಕೆ ದಾಸರಾಗುತ್ತೀರಿ. ನಿಮ್ಮ ಭವಿಷ್ಯತ್ತಿನ ಬದುಕೇ ನಾಶವಾಗುವ, ಯುವಶಕ್ತಿಯನ್ನು ಹಾಳುಮಾಡಿಕೊಳ್ಳುವ, ತೊಂದರೆಗೆ ಸಿಲುಕುವ ಸನ್ನಿವೇಶವನ್ನು ಕಾಣುತ್ತಿದ್ದೇವೆ. ಆ ದೃಷ್ಟಿಯಿಂದ ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹಸಚಿವರು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಸರ್ಕಾರ ಕೋಟ್ಯಂತರ ರೂ. ವಿದ್ಯಾರ್ಥಿಗಳ ಶಿಕ್ಷಣ ವ್ಯವಸ್ಥೆಗಾಗಿ ವೆಚ್ಚ ಮಾಡುತ್ತದೆ. ನಿಮ್ಮ ಮತ್ತು ಪಾಲಕರ ಆಶೋತ್ತರಗಳಿಗೆ ದೇಶದ ಆಸ್ತಿಯಾಗುವ ನೀವು ವ್ಯಸನಕ್ಕೆ ಬಲಿಯಾಗಬಾರದು. ಆ ದೃಷ್ಟಿಯಿಂದ ನನ್ನ ಕ್ಷೇತ್ರದಲ್ಲಿ ಸ್ವಲ್ಪ ಕಡಿಮೆಯಿದೆ ಎಂದು ಹೇಳಲಾದರೂ ಆಗಾಗ ಗಾಂಜಾ ವಾಸನೆ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಸರ್ಕಾರ ಕೇವಲ ನಾಲ್ಕು ತಿಂಗಳಲ್ಲಿ ₹೪೮೫ ಕೋಟಿ ಮೌಲ್ಯದ ಹೆರಾಯ್ನ್ ವಶಪಡಿಸಿಕೊಂಡಿದೆ. ಅಂದರೆ ಎಷ್ಟು ದೊಡ್ಡ ಪ್ರಮಾಣದಲ್ಲಿ ಮಾದಕ ದ್ರವ್ಯ ಜನರನ್ನು ತಲುಪುತ್ತಿದೆ ಎಂಬುದನ್ನು ಕಾಣಬಹುದು ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಮಾಹಿತಿ ನೀಡಿ, ಅತಿಯಾದ ಅಂತರ್ಜಾಲ, ಜೂಜು, ತಂಬಾಕು, ಬೀಡಿ, ಗುಟ್ಕಾ, ಪಾನ್ ಮಸಾಲಾ, ಆನ್‌ಲೈನ್ ಗೇಮ್ ಇವುಗಳು ನಮ್ಮನ್ನಲ್ಲದೇ ನಮ್ಮ ಕುಟುಂಬವನ್ನೇ ನಾಶಮಾಡುತ್ತದೆ. ನಾವು ಹಣ ನೀಡಿ ಕ್ಯಾನ್ಸರ್ ಖರೀದಿಸಿದಂತೆ. ರಾಜ್ಯದಲ್ಲಿ ಒಂದು ವರ್ಷದಲ್ಲಿ ೧೦ ಸಾವಿರಕ್ಕೂ ಅಧಿಕ ಜನರು ಚಟಗಳಿಂದ ಸಾವಿಗೀಡಾಗಿದ್ದಾರೆ. ಆದ್ದರಿಂದ ನಮ್ಮ ಪಾಲಕರ ಕನಸನ್ನು ನನಸಾಗಿಸಿ, ಜೀವನದಲ್ಲಿ ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ ಎಂದರು.ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಡಿ. ಜನಾರ್ದನ್ ಮಾತನಾಡಿದರು.
ತಹಶೀಲ್ದಾರ ಎಂ.ಆರ್. ಕುಲಕರ್ಣಿ, ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಎಸ್.ಟಿ. ವೈದ್ಯ, ಪಿಎಸ್‌ಐಗಳಾದ ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ ಉಪಸ್ಥಿತರಿದ್ದರು. ಪಿ.ಸಿ. ಮಾಲತೇಶ ಕಡಪಟ್ಟಿ ಪ್ರಾರ್ಥಿಸಿದರು. ಪಿಎಸ್ಐ ರಾಜಶೇಖರ ವಂದಲಿ ಸ್ವಾಗತಿಸಿ, ಪ್ರತಿಜ್ಞಾವಿಧಿ ಬೋಧಿಸಿದರು. ಪಿಸಿ ರೇಖಾ ಎಂ.ಎಸ್. ನಿರ್ವಹಿಸಿ, ವಂದಿಸಿದರು. ಈ ಸಂದರ್ಭ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಕಿರುನಾಟಕ ಪ್ರದರ್ಶನಗೊಂಡಿತು. ಪಿಯು ಕಾಲೇಜು ಮತ್ತು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾದಲ್ಲಿ ಭಾಗವಹಿಸಿ, ಭಿತ್ತಿಪತ್ರ ವಿತರಿಸಿ, ಮೆರವಣಿಗೆ ನಡೆಸಿದರು.