ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ವಿದ್ಯಾರ್ಥಿಗಳ ಸಾಧನೆಗೆ ಪೋಷಕರ ಮತ್ತು ಶಿಕ್ಷಕರ ಕೊಡುಗೆ ಅಪಾರ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಪೋಷಕರ ಮತ್ತು ಶಿಕ್ಷಕರ ತ್ಯಾಗವನ್ನು ಮರೆಯಬಾರದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.ಅವರು ಮಂಗಳವಾರ ವಿದ್ಯಾಗಿರಿಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಆಳ್ವಾಸ್ ಪ.ಪೂ. ಕಾಲೇಜಿನ ಸಾಂಸ್ಕೃತಿಕ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರತಿ ಕೆಲಸವನ್ನು ಶ್ರದ್ಧೆಯಿಂದ, ಮನಸ್ಸಿಟ್ಟು ನಿರ್ವಹಿಸಿ. ಆಗ ಅಭ್ಯುದಯ ಸಹಜವಾಗಿ ನಮ್ಮಲ್ಲಿ ಮೂಡುತ್ತದೆ. ಕೆಲವು ಸಂದರ್ಭದಲ್ಲಿ ನಮ್ಮ ನಡುವೆ ಇರುವ ವ್ಯವಸ್ಥೆ ನಮಗೆ ಕಟ್ಟುನಿಟ್ಟಾಗಿ ಇದ್ದಾಗ ಕಷ್ಟವೆನಿಸಿದರೂ, ಅವುಗಳು ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ತರ ಪಾತ್ರವಹಿಸುತ್ತವೆ ಎಂದರು.ಆಳ್ವಾಸ್ನಲ್ಲಿ 5 ಗಂಟೆಯ ನಂತರ ಆರಂಭವಾಗುವ ಕಲಿಕೆ ಹೆಚ್ಚು ಪರಿಣಾಮಕಾರಿಯಾಗಿದೆ. ಈ ಯೋಚನೆ ಮತ್ತು ಯೋಜನೆಯ ಹಿಂದಿನ ವ್ಯಕ್ತಿ ಡಾ.ಎಂ. ಮೋಹನ್ ಆಳ್ವರು. ಪ್ರತಿ ವಿದ್ಯಾಸಂಸ್ಥೆಗೂ ಅರ್ಥ ಬರುವುದು ವಿದ್ಯಾರ್ಥಿಗಳಿಂದ. ನಾವು ಗೆಲುವಿನಿಂದ ಏನನ್ನು ಕಲಿಯಲು ಸಾಧ್ಯವಿಲ್ಲ. ಆದರೆ ಸೋಲು ನಮಗೆ ಹೆಚ್ಚಿನ ಪಾಠ ಕಲಿಸುತ್ತದೆ. ಆಳ್ವಾಸ್ನಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಗಳು ಸಂಸ್ಥೆಯ ಹೆಸರಿಗಷ್ಟೇ ಅಲ್ಲ. ವಿದ್ಯಾರ್ಥಿಗಳು ಅದರಿಂದ ಶಿಕ್ಷಣವನ್ನು ಪಡೆಯಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಪ.ಪೂ. ಕಾಲೇಜಿನ ಪ್ರಾಚಾರ್ಯ ಪ್ರೊ.ಸದಾಕತ್, ಜಗತ್ತು ವೇಗವಾಗಿ ಬದಲಾವಣೆ ಹೊಂದುತ್ತಿದೆ. ಆ ಬದಲಾವಣೆಗೆ ನಾವು ಸಿದ್ಧರಾಗಬೇಕಿದೆ. ಡಾ. ಮೋಹನ್ ಆಳ್ವರ ಉದ್ದಾತ ಗುಣ ಎಂದರೆ ಅವರು ಏನನ್ನು ಯೋಚಿಸಬೇಕೆಂದು ಹೇಳುವುದಿಲ್ಲ, ಬದಲಾಗಿ ಹೇಗೆ ಯೋಚಿಸಬೇಕೆಂಬುದನ್ನು ತಿಳಿಸುತ್ತಾರೆ. ಅವರ ಅಂತರ್ಗತ ಗುಣಗಳನ್ನ ನಮ್ಮಲ್ಲಿ ಅಳವಡಿಸಿಕೊಂಡಾಗ ನಾವು 21ನೇ ಶತಮಾನದ ಎಲ್ಲ ಸವಾಲುಗಳನ್ನು ಸ್ವೀಕರಿಸಲು ಸದೃಢರಾಗುತ್ತವೆ ಎಂದರು.ಕಾರ್ಯಕ್ರಮದಲ್ಲಿ ಆಳ್ವಾಸ್ ಪ.ಪೂ. ಕಾಲೇಜಿನ ವಿಜ್ಞಾನ ವಿಭಾಗದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಜಪಾನ್ನ ಸೋಜೊ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಹಾಗೂ ಗ್ರಾಜ್ಯುವೇಟ್ ಸ್ಕೂಲ್ ಆಫ್ ಎಂಜಿನಿಯರಿಂಗ್ನ ಪರಿಣಾಮಕಾರಿ ಎಂಜಿನಿಯರಿಂಗ್ನ ಪ್ರಗತಿ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ರುಚಿ ಥೋಮೊಶಿಗೆ, ಸೋಜೊ ಅಂತಾರಾಷ್ಟ್ರೀಯ ಕೇಂದ್ರದ ವ್ಯವಸ್ಥಾಪಕಿ ಮಿಯೆ ಒಕುಬೊ, ಮೆಕಾನಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಡಾ.ಅಕಿಸಾ ಮೊರಿ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್. ಇದ್ದರು.ಉಪನ್ಯಾಸಕಿ ಡಾ.ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಂಘದ ಸಹಸಂಚಾಲಕಿ ಪ್ರಿಯಾ ಎಚ್.ಎಸ್. ವಂದಿಸಿದರು.