ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳೂ ಶಿಕ್ಷಣದ ಒಂದು ಭಾಗವಾಗಿದ್ದು, ವಿದ್ಯಾರ್ಥಿಗಳು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಸಾಂಸ್ಕೃತಿಕವಾಗಿ ವಿಕಸನಗೊಳ್ಳುವಂತೆ ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಘಟಕಗಳನ್ನು ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಅಪಾರ ಸಾಂಸ್ಕೃತಿಕ ಪ್ರತಿಭೆಗಳಿವೆ. ಕಲೆ, ಸಾಹಿತ್ಯ, ಸಿನಿಮಾ, ಕಿರುತೆರೆ, ಕ್ರೀಡೆ, ಕೃಷಿ ಸಂಶೋಧನೆ, ಸಂಗೀತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮ ಪ್ರತಿಭೆ ಪ್ರದರ್ಶನ ಮಾಡುತ್ತಿವೆ ಎಂದರು.
ವಿದ್ಯಾರ್ಥಿಗಳು ವೇದಿಕೆಯನ್ನು ಹುಡುಕುವ ಬದಲು ಸಾಮಾಜಿಕ ಮಾಧ್ಯಮದ ಮೂಲಕ ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ವಿಕಸನಕ್ಕೆ ಅಗತ್ಯ ವೇದಿಕೆ ನಿರ್ಮಿಸಿಕೊಳ್ಳಬಹುದು. ಯಾವುದೇ ಕೀಳರಿಮೆಗೆ ಒಳಗಾಗದೆ ತಮ್ಮ ಪ್ರತಿಭೆ ಪ್ರದರ್ಶಿಸಿ ಕಲಿಕೆಯ ಜೊತೆಗೆ ಸಾಮಾಜಿಕ ಚಿಂತನೆಗಳನ್ನು ಬೆಳೆಸಿಕೊಳ್ಳುವಂತೆ ಕಿವಿಮಾತು ಹೇಳಿದರು.ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಮೈಸೂರು ಕೃಷ್ಣಮೂರ್ತಿ ಮಾತನಾಡಿ, ಸಾಂಸ್ಕೃತಿಕ ಶಿಕ್ಷಣದ ತಳಹದಿ ಮೇಲೆ ಪಠ್ಯ ಶಿಕ್ಷಣ ಬೆಳೆಯಬೇಕು. ಪಠ್ಯ ಕೇಂದ್ರೀಕೃತ ಶಿಕ್ಷಣದ ಮೂಲಕ ನಾವು ಉದ್ಯೋಗ ಪಡೆಯಬಹುದು. ಆದರೆ ಸಾಂಸ್ಕೃತಿಕ ಶಿಕ್ಷಣದ ಆಯಾಮವಿಲ್ಲದೆ ಔದ್ಯೋಗಿಕ ಶಿಕ್ಷಣ ಯಶಸ್ಸಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ನಮ್ಮೊಳಗಿನ ಅಹಂಕಾರವನ್ನು ನಾಶಮಾಡುವುದೇ ನಿಜವಾದ ಶಿಕ್ಷಣ. ನಮ್ಮ ಅಹಂಕಾರವನ್ನು ನಾಶಮಾಡಿ ಸರಿದಾರಿಯಲ್ಲಿ ಮುನ್ನೆಡೆಸುವ ಶಕ್ತಿ ಸಾಂಸ್ಕೃತಿಕ ಶಿಕ್ಷಣಕ್ಕೆ ಮಾತ್ರ ಇದೆ ಎಂದು ಅಭಿಪ್ರಾಯಪಟ್ಟರು.ಇದೇ ವೇಳೆ ಕಾಲೇಜು ವಿದ್ಯಾರ್ಥಿನಿಯರು ಹೊರತಂದಿರುವ ಕಾಲೇಜಿನ ವಾರ್ಷಿಕ ಸಂಚಿಕೆ ಹೇಮ ಕಾರಂಜಿಯನ್ನು ಅತಿಥಿಗಳು ಬಿಡುಗಡೆ ಮಾಡಿದರು. ಪ್ರಾಂಶುಪಾಲರಾದ ಎಸ್.ಅನುರಾಧಾ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಮಡುವಿನಕೋಡಿ ರತಿ ಮಹದೇವ್, ಅಕ್ಕಿಹೆಬ್ಬಾಳು ಲೋಕೇಶ್, ಚಿಕ್ಕಬಸಪ್ಪ, ಕಾಲೇಜು ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ.ಸಿ.ಎಸ್.ಕೆಂಡಗಣ್ಣೇಗೌಡ, ಕ್ರೀಡಾ ಸಮಿತಿ ಸಂಚಾಲಕ ಡಾ. ಎಚ್.ಆರ್. ಶ್ಯಾಮ್, ರೆಡ್ ಕ್ರಾಸ್ ಸಮಿತಿ ಸಂಚಾಲಕ ಮಹದೇವಸ್ವಾಮಿ, ರಾಷ್ಟ್ರೀಯ ಸೇವಾ ಯೋಜನಾ ಸಮಿತಿ ಸಂಚಾಲಕ ಎಂ.ಶಿವಸ್ವಾಮಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಚಾಲಕಿ ನಫೀಸಾ ನಾಯಕವಾಡಿ, ಜಿ.ಮಧು, ಸಿ.ಬಿ.ಚೇತನಕುಮಾರ್ ಇದ್ದರು.