ಸಾರಾಂಶ
ಮುಂಡರಗಿ: ಆ. 15ರ ರಾಷ್ಟ್ರೀಯ ಹಬ್ಬ, ನ. 1ರ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಳ್ಳದಿರುವುದು ನನ್ನ ಗಮನಕ್ಕೆ ಬಂದಿದ್ದು, ವಿದ್ಯಾರ್ಥಿಗಳು ತರಗತಿಗಳ ಜತೆಗೆ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಿರುವುದು ಬೇಸರ ಮೂಡಿಸಿದ್ದು, ಕಾರಣ ಕೇಳಿ ಅಂತಹ ವಿದ್ಯಾರ್ಥಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಸೂಚಿಸಿದರು.
ಸೋಮವಾರ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ತೋಂಟದಾರ್ಯ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ 2025-26ನೇ ಸಾಲಿನ ಪಠ್ಯ ಪೂರಕ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಸರ್ಕಾರ ಕೋಟ್ಯಂತರ ರು. ಹಣ ಖರ್ಚು ಮಾಡಿ ಎಲ್ಲ ಮೂಲ ಸೌಕರ್ಯ ಕಲ್ಪಿಸಿದ್ದು, ಎಲ್ಲ ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಬೇಕು. ಸರ್ಕಾರ ಮಂಜೂರು ಮಾಡಿದ ₹3.22 ಕೋಟಿ ಅನುದಾನದಲ್ಲಿ ಇಂದು ಮೂರು ಅಂತಸ್ತಿನ ಸುಸಜ್ಜಿತ ಕಟ್ಟಡದಲ್ಲಿ ಡಿಜಿಟಲ್ ಗ್ರಂಥಾಲಯ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪರಸ್ಪರ ಶೌಚಾಲಯಗಳ ನಿರ್ಮಾಣಕ್ಕಾಗಿ ಭೂಮಿಪೂಜೆ ನೆರವೇರಿಸಲಾಯಿತು. ಮುಂಬರುವ ದಿನಗಳಲ್ಲಿ ಇಲ್ಲೊಂದು ಬಸ್ ನಿಲ್ದಾಣ ಮಾಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡಲಾಗುವುದು. ವಿದ್ಯಾರ್ಥಿಗಳು ಇವೆಲ್ಲ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಉತ್ತಮವಾಗಿ ವ್ಯಾಸಂಗ ಮಾಡಬೇಕು ಎಂದರು.ವಿಶ್ರಾಂತ ಪ್ರಾಧ್ಯಾಪಕ ಆರ್.ಎಲ್. ಪೊಲೀಸಪಾಟೀಲ ಮಾತನಾಡಿ. ಕಾಲೇಜಿನ ಸಿಬ್ಬಂದಿ ಪಠ್ಯದಂತೆ ಪಠ್ಯೇತರ ಚಟುವಟಿಕೆಗೂ ಒಂದು ವೇಳಾಪಟ್ಟಿ ತಯಾರಿಸಬೇಕು. ವಿದ್ಯಾರ್ಥಿಗಳು ಶಾರೀರಿಕ, ಬೌದ್ಧಿಕ ಮತ್ತು ಮಾನಸಿಕ ಶಕ್ತಿ ಬಳಕೆ ಮಾಡಿಕೊಂಡರೆ ಸಮಗ್ರ ವ್ಯಕ್ತಿತ್ವ ವಿಕಸನಾಗುತ್ತದೆ ಎಂದರು.
ಕುಮಾರಸ್ವಾಮಿ ಹಿರೇಮಠ ಮಾತನಾಡಿ, ವಿದ್ಯಾರ್ಥಿ ಜೀವನ ಬಂಗಾರದ ಜೀವನ. ಅದನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು. ಸರ್ಕಾರ ಸರ್ಕಾರಿ ಶಾಲಾ- ಕಾಲೇಜುಗಳಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಿದ್ದು, ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಪ್ರಾಚಾರ್ಯ ಉಮಾ ಕೊಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಇನ್ನುಮುಂದೆ ಎಲ್ಲ ರಾಷ್ಟ್ರೀಯ ಹಾಗೂ ಇತರ ಕಾರ್ಯಕ್ರಮಗಳಲ್ಲಿ ತಪ್ಪದೇ ಪಾಲ್ಗೊಳ್ಳುವಂತೆ ನೋಡಿಕೊಳ್ಳುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜು ಮೇಲ್ವಿಚಾರಣಾ ಸಮಿತಿ ಸದಸ್ಯರಾದ ಎಸ್.ಎಸ್. ಗಡ್ಡದ, ಮಂಜುನಾಥ ಅರಳಿ, ರುದ್ರಗೌಡ ಪಾಟೀಲ, ಎಚ್. ವಿರುಪಾಕ್ಷಗೌಡ, ರವೀಂದ್ರಗೌಡ ಪಾಟೀಲ, ಪ್ರಶಾಂತಗೌಡ ಗುಡದಪ್ಪನವರ, ಮಲ್ಲಿಕಾರ್ಜುನ ಹನಜಿ, ಅರುಣಾ ಪಾಟೀಲ, ಜ್ಯೋತಿ ಹಾನಗಲ್, ಪ್ರಭಾವತಿ ಬೆಳವಣಕಿಮಠ ಸೇರಿ ಅನೇಕರು ಉಪಸ್ಥಿತರಿದ್ದರು. ಕಾವೇರಿ ಬೋಲಾ ಸ್ವಾಗತಿಸಿ, ಡಾ. ಮಿಟ್ಯಾ ನಾಯಕ ನಿರೂಪಿಸಿ, ಪ್ರಕಾಶ ಪೂಜಾರ ವಂದಿಸಿದರು.;Resize=(128,128))
;Resize=(128,128))
;Resize=(128,128))