ಸಾರಾಂಶ
ಶಾಲಾ ಮಕ್ಕಳಿಗೆ ಅಪೌಷ್ಟಿಕತೆ ಇರುವುದನ್ನು ಮನಗಂಡು ರಾಜ್ಯ ಸರ್ಕಾರ ಬಿಸಿಯೂಟದ ಜೊತೆಗೆ, ಹಾಲು, ರಾಗಿಮಾಲ್ಟ್, ಮೊಟ್ಟೆ ಮುಂತಾದುವುಗಳನ್ನು ಒದಗಿಸುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಕಡೆಗೆ ಆಸಕ್ತಿ ಕಡಿಮೆಯಾಗುತ್ತಿದ್ದು ಇದು ಅತ್ಯಂತ ಕಳವಳಕಾರಿ ವಿಷಯವಾಗಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸ ಮಾಡುವ ಮೂಲಕ ಪಾಲಕರು ಹಾಗೂ ನಾಡಿಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು ತಿಳಿಸಿದರು.ಪಟ್ಟಣದ ಪುರಸಭಾ ವ್ಯಾಪ್ತಿಯ ಹೊಸಹೊಳಲು ಸರ್ಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳಿಗೆ ಗುಲಾಬಿ, ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿ, ಬೇಸಿಗೆ ರಜೆ ಮುಗಿಸಿ ಶಾಲೆಗೆ ಆಗಮಿಸಿದ ಮಕ್ಕಳನ್ನು ಪ್ರೀತಿಯಿಂದ ಯೋಗಕ್ಷೇಮ ವಿಚಾರಿಸಿದರು.
ಸರ್ಕಾರ ಪ್ರತಿವರ್ಷ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಮಕ್ಕಳಿಗೆ ಉಚಿತ ಶೂ ಮತ್ತು ಸಾಕ್ಸ್, ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ಜ್ಞಾನಾರ್ಜನೆಗಾಗಿ ಕ್ವಿಜ್, ರಸಪ್ರಶ್ನೆ, ಸೇರಿದಂತೆ ವಿವಿಧ ಸವಲತ್ತುಗಳನ್ನು ಒದಗಿಸುತ್ತಿದೆ ಎಂದರು.ಶಾಲಾ ಮಕ್ಕಳಿಗೆ ಅಪೌಷ್ಟಿಕತೆ ಇರುವುದನ್ನು ಮನಗಂಡು ಬಿಸಿಯೂಟದ ಜೊತೆಗೆ, ಹಾಲು, ರಾಗಿಮಾಲ್ಟ್, ಮೊಟ್ಟೆ ಮುಂತಾದುವುಗಳನ್ನು ಒದಗಿಸುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಕಡೆಗೆ ಆಸಕ್ತಿ ಕಡಿಮೆಯಾಗುತ್ತಿದ್ದು ಇದು ಅತ್ಯಂತ ಕಳವಳಕಾರಿ ವಿಷಯವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಿಕ್ಷಣ ಸಂಸ್ಕಾರವನ್ನು ಕಲಿಸುವುದರ ಜೊತೆಗೆ ಬದುಕಿಗೂ ದಾರಿಯಾಗಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ವ್ಯಾಸಂಗವನ್ನು ಮಾಡಬೇಕು. ನಿಮ್ಮ ವ್ಯಾಸಂಗದ ಅವಧಿ ಪೂರ್ಣಗೊಳ್ಳುವವರೆಗೂ ನಿಮ್ಮ ಮನಸ್ಸನ್ನು ಬೇರೆಡೆ ಹರಿಯಬಿಡದೇ ಏಕಾಗ್ರತೆ ಕಡೆಗೆ ಕೊಂಡೊಯ್ಯಬೇಕು ಎಂದರು.ಇದೇ ವೇಳೆ ಇಲಾಖೆಯಿಂದ ಸರಬರಾಜಾಗಿರುವ ಪಠ್ಯಪುಸ್ತಕ ಹಾಗೂ ಎರಡು ಜೊತೆ ಸಮವಸ್ತ್ರಗಳನ್ನು ವಿತರಣೆ ಮಾಡಲಾಯಿತು.
ಹೊಸಹೊಳಲು ಪ್ರೌಢಶಾಲೆ ಮುಖ್ಯಶಿಕ್ಷಕ ಬಿ.ರಾಮಲಿಂಗಯ್ಯ, ಸಹಶಿಕ್ಷಕರಾದ ಡಿ.ರಮೇಶ್, ಯಶೋಧಮ್ಮ, ಬಿ.ಕೆ.ರೇಖಾ, ಎಂ.ಈಶ. ಗೌಡಉಮಾದೇವಿರಾಮು, ಎಂ.ಬಿ.ಪ್ರಕಾಶ್, ಶಿವಲಿಂಗಪ್ಪ, ಪಿಜೆ.ಕುಮಾರ್, ಭಾಗ್ಯ, ರೇಖಾ, ನಳಿನಾಕ್ಷಿ, ಮಹದೇವ ಸೇರಿದಂತೆ ಹಲವರಿದ್ದರು.