ಜ್ಞಾನ ಕ್ಷಿತಿಜ ವಿಸ್ತರಿಸಿಕೊಳ್ಳಲು ವಿದ್ಯಾರ್ಥಿಗಳು ಶ್ರಮ ಪಡಬೇಕು

| Published : Mar 10 2024, 01:48 AM IST

ಜ್ಞಾನ ಕ್ಷಿತಿಜ ವಿಸ್ತರಿಸಿಕೊಳ್ಳಲು ವಿದ್ಯಾರ್ಥಿಗಳು ಶ್ರಮ ಪಡಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳಿಗೆ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಮಾಜವನ್ನು ಪರಿವರ್ತನೆಯ ದಾರಿಯಲ್ಲಿ ತರುವ ಅದ್ಭುತ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ

ಹಿರೇಕೆರೂರು: ಇಂದಿನ ತಂತ್ರಜ್ಞಾನ ಯುಗದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗವು ವೈವಿಧ್ಯಮಯ ಜ್ಞಾನವನ್ನು ಪ್ರಸಾರ ಮಾಡುವಲ್ಲಿ ತನ್ನ ಛಾಪು ಮೂಡಿಸಿದೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಹೇಳಿದರು.

ಹಿರೇಕೆರೂರಿನ ಬಿ.ಆರ್. ತಂಬಾಕದ ಪ್ರಥಮ ದರ್ಜೆ ಮಹಾವಿದ್ಯಾಲಯ, ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಶ್ರೀ ತರಳಬಾಳು ಜಗದ್ಗುರು ಶಿಕ್ಷಣ ಮಹಾವಿದ್ಯಾಲಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ಸಹಯೋಗದಲ್ಲಿ ೫೩೦ನೇ ವ್ಯಾಸಂಗ ವಿಸ್ತರಣಾ ಉಪನ್ಯಾಸ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಮಾಜವನ್ನು ಪರಿವರ್ತನೆಯ ದಾರಿಯಲ್ಲಿ ತರುವ ಅದ್ಭುತ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸಂಸ್ಥೆಯ ವಿದ್ಯಾರ್ಥಿಗಳು ತಮ್ಮ ಜ್ಞಾನ ಕ್ಷಿತಿಜ ವಿಸ್ತರಿಸಿಕೊಳ್ಳಲು ಕಠಿಣ ತಪಸ್ಸು ಮಾಡಬೇಕು. ಅದರೊಂದಿಗೆ ಅದಮ್ಯ ಇಚ್ಛಾಶಕ್ತಿಯನ್ನು ಮೈಗೂಡಿಸಿಕೊಂಡು ಜ್ಞಾನವನ್ನು ಪಡೆದುಕೊಂಡಾಗ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯವೆಂದರು.

ಸಮಾರಂಭದಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಉದ್ಯೋಗ ಅವಕಾಶಗಳು ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ. ಪಂಚಾಕ್ಷರಯ್ಯ ಹಿರೇಮಠ ಮಾತನಾಡಿ, ಜ್ಞಾನವೆಂಬುದು ಸರಳ ಸುಲಭ ಮಾರ್ಗದಿಂದ ದೊರೆಯಲಾರದು. ಇಂತಹ ಉಪನ್ಯಾಸಗಳು ಆದರ್ಶ ವ್ಯಕ್ತಿಗಳ ಜೀವನ ಪರಿಚಯವಿದ್ದಾಗ ಮಾತ್ರ ವಿದ್ಯೆಯನ್ನು ಸಂಪಾದಿಸಬಹುದು. ಈ ಪ್ರಪಂಚದ ಅಸಾಮಾನ್ಯ ದಿಗ್ಗಜರೆಲ್ಲರೂ ತಮ್ಮ ಜೀವನದ ವೈಯಕ್ತಿಕ ಆಸೆ-ಆಕಾಂಕ್ಷೆಗಳನ್ನು ಬದಿಗಿಟ್ಟು ನಿಸ್ವಾರ್ಥಪರವಾಗಿ ಚಿಂತನೆ ಮಾಡಿ ಹಲವು ಆವಿಷ್ಕಾರಗಳಿಗೆ ಕಾರಣರಾಗಿದ್ದಾರೆ. ಅಂಥವರ ಬದುಕಿನ ಕಷ್ಟದ ಹೆಜ್ಜೆಗಳ ದರ್ಶನವಾದಾಗಲೇ ನಮ್ಮ ಜೀವನ ಪಾವನವಾಗುವುದರಲ್ಲಿ ಸಂಶಯವಿಲ್ಲ ಎಂದರು.

ಸಮಾರಂಭದಲ್ಲಿ ಜಲ ಜಾನಪದ ಕುರಿತು ಉಪನ್ಯಾಸ ನೀಡಿದ ಉಪನ್ಯಾಸಕ ಡಾ. ವಿ.ಎಲ್. ಪಾಟೀಲ್, ಜಲವೆಂಬುದು ಈ ಪ್ರಕೃತಿಯ ಜೀವನಾಡಿ. ಅದಿಲ್ಲದೆ ಈ ಭೂಮಿ ಮೇಲೆ ಯಾವ ಜೀವರಾಶಿಯೂ ಬದುಕಲಾರದು. ಇಂದು ನಾವು ನೀರಿಗಾಗಿ ಯುದ್ಧ ಮಾಡುವ ಪ್ರಸಂಗವೇ ಬಂದೊದಗಿದೆ. ನಾವು ನೀರನ್ನು ಭಕ್ಷಿಸುವ ಕಾರ್ಯ ಬಿಟ್ಟು ರಕ್ಷಿಸುವ ಕಾರ್ಯ ಮಾಡದೇ ಹೋದರೆ ನಮಗೆ ಹಾಗೂ ಪ್ರಕೃತಿಯ ಪ್ರತಿಯೊಂದು ಜೀವಿಗಳಿಗೂ ಉಳಿಗಾಲವಿಲ್ಲವೆಂದರು.

ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಎಸ್. ವೀರಭದ್ರಯ್ಯನವರು, ಕವಿವಿ ಪ್ರಸಾರಾಂಗದ ನಿರ್ದೇಶಕ ಡಾ. ಚಂದ್ರಶೇಖರ ರೊಟ್ಟಿಗವಾಡ ಉಪಸ್ಥಿತರಿದ್ದರು. ಪ್ರಸಾರಾಂಗದ ಪ್ರಭಾರ ನಿರ್ದೇಶಕ ಡಾ. ಎನ್. ಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಡಾ. ಎಸ್.ಬಿ. ಚನ್ನಗೌಡ್ರ ಸ್ವಾಗತಿಸಿದರು. ಉಪನ್ಯಾಸಕ ದಾನೇಶ ಟಿ. ಕಾರ್ಯಕ್ರಮ ನಿರೂಪಿಸಿದರು. ಪ್ರಾಚಾಯ ಬಿ.ಪಿ. ಹಳ್ಳೇರ ವಂದಿಸಿದರು.