10ನೇ ತರಗತಿ ನಿಮ್ಮ ಜೀವನವನ್ನು ಬದಲಿಸುವ ಅತ್ಯಂತ ಮಹತ್ವದ ಹಂತವಾಗಿದೆ. ಈ ಹಂತದಲ್ಲಿ ನೀವು ತೋರಿಸುವ ಶ್ರಮ, ಶಿಸ್ತು ಮತ್ತು ಗಮನವೇ ನಿಮ್ಮ ಮುಂದಿನ ಶಿಕ್ಷಣ ಹಾಗೂ ಜೀವನದ ದಿಕ್ಕನ್ನು ನಿರ್ಧರಿಸುತ್ತದೆ ಎಂದು ಉಮಾದೇವಿ ಹೇಳಿದರು.

ಕೊಪ್ಪಳ: ಎಸ್‌ಎಸ್‌ಎಲ್‌ಸಿ ಫಲಿತಾಂಶವೇ ಮಕ್ಕಳ ಜೀವನದ ದಿಕ್ಕು ನಿರ್ಧರಿಸುತ್ತದೆ. ಸಾವಿರಾರು ವಿದ್ಯಾರ್ಥಿಗಳು ಇಂತಹ ಶೈಕ್ಷಣಿಕ ಕಾರ್ಯಾಗಾರಗಳನ್ನು ಗಂಭೀರವಾಗಿ ತೆಗೆದುಕೊಂಡು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಬಿಇಒ ಉಮಾದೇವಿ ಬಸಾಪೂರ ಹೇಳಿದರು.

ಜಿಲ್ಲೆಯ ಕುಷ್ಟಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್, ಎಸ್‌ವಿಸಿ ಶಿಕ್ಷಣ ಸಂಸ್ಥೆ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಮತ್ತು ಬಳ್ಳಾರಿಯ ಸನ್ಮಾರ್ಗ ಗೆಳೆಯರ ಬಗಳದ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ (40+) ಸಿದ್ಧತಾ ಕಾರ್ಯಾಗಾರ ಅಂಗವಾಗಿ ವಿದ್ಯಾರ್ಥಿಗಳಿಗೆ ತಜ್ಞರಿಂದ ಜರುಗಿದ ವಿಶೇಷ ಶಿಬಿರದ ಸಮಾರೋಪದಲ್ಲಿ ಬಳ್ಳಾರಿ ಸನ್ಮಾರ್ಗ ಗೆಳೆಯರ ಬಳಗವನ್ನು ಸನ್ಮಾನಿಸಿ ಮಾತನಾಡಿದರು.

10ನೇ ತರಗತಿ ನಿಮ್ಮ ಜೀವನವನ್ನು ಬದಲಿಸುವ ಅತ್ಯಂತ ಮಹತ್ವದ ಹಂತವಾಗಿದೆ. ಈ ಹಂತದಲ್ಲಿ ನೀವು ತೋರಿಸುವ ಶ್ರಮ, ಶಿಸ್ತು ಮತ್ತು ಗಮನವೇ ನಿಮ್ಮ ಮುಂದಿನ ಶಿಕ್ಷಣ ಹಾಗೂ ಜೀವನದ ದಿಕ್ಕನ್ನು ನಿರ್ಧರಿಸುತ್ತದೆ”. “ಸರ್ಕಾರ ವಿದ್ಯಾರ್ಥಿಗಳಿಗಾಗಿ ಮಧ್ಯಾಹ್ನದ ಊಟ, ಉಚಿತ ಪಠ್ಯಪುಸ್ತಕಗಳು, ಸಮವಸ್ತ್ರ ಸೇರಿದಂತೆ ಹಲವು ರೀತಿಯ ಅನೂಕೂಲಗಳನ್ನು ಒದಗಿಸಿದೆ. ಈಗಾಗಲೇ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ತರಗತಿಗಳನ್ನು ಅಳವಡಿಸಲಾಗುತ್ತಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬದ್ಧವಾಗಿದೆ” .

ಇಂತಹ ಸೌಲಭ್ಯಗಳ ನಡುವೆಯೂ ಶಿಕ್ಷಣ ವ್ಯವಸ್ಥೆಗೆ ವಿದ್ಯಾರ್ಥಿಗಳಿಂದ ಬೇಕಾಗಿರುವುದು ಒಂದೇ ಎಂದು ಅದು ಉತ್ತಮ ಅಂಕ. “ನಮಗೆ ನೀವು ಕೊಡುವ ಪ್ರತಿಫಲ ಎಂದರೆ 10ನೇ ತರಗತಿಯಲ್ಲಿ ಉತ್ತಮವಾದ ಫಲಿತಾಂಶ. ನೀವು ಉತ್ತಮವಾಗಿ ಪಾಸಾದರೆ ಅದೇ ಸರ್ಕಾರಕ್ಕೂ, ಶಿಕ್ಷಕರಿಗೂ,ಸಮುದಾಯಕ್ಕೂ ಸಿಗುವ ಸಂತೋಷ ಎಂದರು.

ಎಸ್.ಎಸ್.ಎಲ್.ಸಿ. ಮಕ್ಕಳ ಫಲಿತಾಂಶ ಸುಧಾರಣೆಗಾಗಿ ಕ-ಕ ಅಭಿವೃದ್ಧಿ ಅನುದಾನದಲ್ಲಿ ₹25 ಲಕ್ಷ ವೆಚ್ಚದಲ್ಲಿ ಅತಿಥಿ ಶಿಕ್ಷಕರನ್ನೂ ನೇಮಕ ಮಾಡಿಕೊಂಡು ಭೋದನೆ ಕಾರ್ಯ ಮಾಡಲಾಗುತ್ತಿದೆ ಎಂದರು.

ಕನ್ನಡಪ್ರಭ ಪತ್ರಿಕೆಯ ಹುಬ್ಬಳ್ಳಿ ಸ್ಥಾನಿಕ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ, ಜಿಲ್ಲಾ ವಿಶೇಷ ವರದಿಗಾರ ಸೋಮರಡ್ಡಿ ಅಳವಂಡಿ, ಸುವರ್ಣ ನ್ಯೂಸ್ ಜಿಲ್ಲಾ ವರದಿಗಾರ ದೊಡ್ಡೇಶ ಯಲಿಗಾರ, ವಿಜಯ ಚಂದ್ರಶೇಖರ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಿಇಒ ಜಗದೀಶ ಅಂಗಡಿ, ಸನ್ಮಾರ್ಗ ಗೆಳೆಯರ ಬಳಗದವರು, ಸಾಹಿತಿ ಜೀವನಸಾಬ್ ಬಿನ್ನಾಳ, ಕನ್ನಡಪ್ರಭ ಛಾಯಾಗ್ರಾಹಕ ನಾಭಿರಾಜ ದಸ್ತೇನವರ, ಪ್ರಸರಣಾಂಗ ವಿಭಾಗದ ಈಶ್ವರಗೌಡ, ತಾಲೂಕು ವರದಿಗಾರರಾದ ಪರಶಿವಮೂರ್ತಿ ದೋಟಿಹಾಳ, ಪಾಲಾಕ್ಷಿ ತಿಪ್ಪಳ್ಳಿ, ಪ್ರಹ್ಲಾದರೆಡ್ಡಿ, ಅಮರೇಶ್ವರಸ್ವಾಮಿ ಕಂದಗಲ್ಲಮಠ, ಏಕನಾಥ ಮೇದಿಕೇರಿ, ಸುವರ್ಣ ನ್ಯೂಸ್ ಕ್ಯಾಮೆರಾಮನ್ ಶಮೀರ್ ಪಾಟೀಲ್ ಇತರರಿದ್ದರು.

ಸರಿಯಾದ ಅಧ್ಯಯನದಿಂದ ಉತ್ತಮ ಫಲಿತಾಂಶ: ಪುರುಷೋತ್ತಮ

ಕುಷ್ಟಗಿ: ಮಕ್ಕಳು ಸರಿಯಾದ ಕ್ರಮದಲ್ಲಿ ಅಧ್ಯಯನ ಮಾಡಿದಾಗ ಮಾತ್ರ ಉತ್ತಮ ಫಲಿತಾಂಶ ಪಡೆದುಕೊಳ್ಳಲು ಸಾಧ್ಯ ಎಂದು ಬಳ್ಳಾರಿಯ ಡೆಲ್ಲಿ ಕಾಲೇಜಿನ ಉಪನ್ಯಾಸಕ ಬಿ. ಪುರುಷೋತ್ತಮ ಹೇಳಿದರು.ಪಟ್ಟಣದ ಸ.ಪ್ರ.ದ. ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಕನ್ನಡಪ್ರಭ/ಸುವರ್ಣನ್ಯೂಸ್, ಸಿವಿಸಿ ಫೌಂಡೇಶನ್, ಎಸ್.ವಿ.ಸಿ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಪರೀಕ್ಷಾ 40+ ಸಿದ್ಧತಾ ಕಾರ್ಯಾಗಾರದಲ್ಲಿ ಮಕ್ಕಳಿಗೆ ಗಣಿತ ಹಾಗೂ ಇಂಗ್ಲೀಷ್ ವಿಷಯದ ಕುರಿತು ತರಬೇತಿ ನೀಡಿದರು.ಕಲಿಕೆ ಅಸಾಧ್ಯವಾದದು ಅಲ್ಲ. ಇಚ್ಛಾಸಕ್ತಿ ಹೊಂದಿರುವವರು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಎಸ್ಎಸ್ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ಸಿಗಲಿ, ಎಲ್ಲ ಮಕ್ಕಳಿಗೂ ಉತ್ತಿರ್ಣರಾಗಲಿ ಎನ್ನುವ ಧ್ಯೇಯದೊಂದಿಗೆ ಈ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದರು.ನಂತರ ಬಳ್ಳಾರಿಯ ಕೆಪಿಎಸ್ ಶಿಕ್ಷಕ ಪಿ. ಹರಿಪ್ರಸಾದ ಕನ್ನಡ ವಿಷಯದ ಕುರಿತು ತರಬೇತಿ ನೀಡಿ, ಪತ್ರ ಲೇಖನ, ಅಲಂಕಾರ, ಛಂದಸ್ಸು, ಸಂಧಿಗಳು, ಸಮಾಸಗಳು, ವಿಭಕ್ತಿ ಪ್ರತ್ಯೇಯಗಳು, ಕವಿ ಪರಿಚಯ, ಸಂದರ್ಭ ಸಹಿತ ವಿವರಿಸಿದರು.

ಡಣಾಪುರದ ಶಿಕ್ಷಕ ಸಿದ್ದಲಿಂಗೇಶ ಗದುಗಿನ ವಿಜ್ಞಾನ ವಿಷಯದಲ್ಲಿ ಎಡಗೈ, ಬಲಗೈ ನಿಯಮಗಳು, ರಾಸಾಯನಿಕ ಸಮೀಕರಣಗಳು, ರೇಖಾ ಚಿತ್ರಗಳು, ಆಮ್ಲಗಳು, ಮತ್ತು ಪ್ರತ್ಯಾಮ್ಲಗಳು, ಜೀವ ಕ್ರೀಯೆಗಳ ಕುರಿತಾಗಿ ಪರಿಪೂರ್ಣ ಮಾಹಿತಿ ನೀಡಿದರು. ಮಕ್ಕಳು ನಡುನಡುವೆ ತರಬೇತುದಾರರ ಪ್ರಶ್ನೆಗಳಿಗೂ ಉತ್ತರಿಸಿದರು. ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಮಕ್ಕಳನ್ನು ಸನ್ಮಾರ್ಗ ಗೆಳೆಯರ ಬಳಗದಿಂದ ಉಡುಗೊರೆ ನೀಡಿ ಗೌರವಿಸಲಾಯಿತು.