ಸಾರಾಂಶ
ಶಾಲೆಯ ಸರ್ವತೋಮುಖ ಏಳಿಗೆಯಲ್ಲಿ ಪಠ್ಯಕ್ರಮದ ಜೊತೆಗೆ ಕ್ರೀಡಾ ಚಟುವಟಿಕೆಗಳು ನಡೆಯಬೇಕು.
ಭಟ್ಕಳ: ಪಟ್ಟಣದ ಐಸಿಎಸ್ಇ ಪಠ್ಯಕ್ರಮದ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ೧೪ ಮತ್ತು ೧೭ ರ ವಯೋಮಿತಿಯ ಹುಡುಗರ ಮತ್ತು ಹುಡುಗಿಯರ ವಿಭಾಗದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ.ಸುರೇಶ ನಾಯಕ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಶಾಲೆಯ ಸರ್ವತೋಮುಖ ಏಳಿಗೆಯಲ್ಲಿ ಪಠ್ಯಕ್ರಮದ ಜೊತೆಗೆ ಕ್ರೀಡಾ ಚಟುವಟಿಕೆಗಳು ನಡೆಯಬೇಕು. ಇಂದಿನ ಯುಗದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಮಕ್ಕಳಿಗೆ ಬಹಳಷ್ಟು ಪ್ರೋತ್ಸಾಹ ಹಾಗೂ ಅವಕಾಶಗಳಿದ್ದು, ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಟ್ರಸ್ಟಿ ಗುರುದತ್ ಶೇಟ್, ಜ್ಞಾನಪೂರ್ಣ ಕಾಲೇಜಿನ ಮುಖ್ಯಸ್ಥ ಡಾ.ಸ್ವಾಮಿ ಕೆ.ಎನ್, ವಿದ್ಯಾಂಜಲಿ ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಕಾಮತ್ ಉಪಸ್ಥಿತರಿದ್ದರು. ಪಂದ್ಯಾವಳಿಯಲ್ಲಿ ವಯೋಮಿತಿ ೧೪ ಬಾಲಕರ ವಿಭಾಗದಲ್ಲಿ ವಿದ್ಯಾಂಜಲಿ ಶಾಲೆ, ವಯೋಮಿತಿ ೧೪ ಬಾಲಕಿಯರ ವಿಭಾಗದಲ್ಲಿ ಜ್ಞಾನಪೂರ್ಣ ಶಾಲೆ, ವಯೋಮಿತಿ ೧೭ ಬಾಲಕರ ವಿಭಾಗದಲ್ಲಿ ವಿದ್ಯಾಂಜಲಿ ಶಾಲೆ, ವಯೋಮಿತಿ ೧೭ ಬಾಲಕಿಯರ ವಿಭಾಗದಲ್ಲಿ ಜ್ಞಾನಪೂರ್ಣ ಶಾಲೆಯು ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿವೆ. ವಿದ್ಯಾಂಜಲಿ ಪಬ್ಲಿಕ್ ಶಾಲೆಯ ೮ ವಿದ್ಯಾರ್ಥಿಗಳು ಚೆಸ್ ಆಟದಲ್ಲಿ , ೮ ವಿದ್ಯಾರ್ಥಿಗಳು ಕರಾಟೆಯಲ್ಲಿ, ಮತ್ತು ಎರಡು ತಂಡಗಳು ಕಬ್ಬಡ್ಡಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಉತ್ತಮ ಸಾಧನೆ ಮಾಡಿದೆ.ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.