ಮಳೆ-ಚಳಿ ಎನ್ನದೆ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟ ಬೆಂಬಲಿಸಿ ಶನಿವಾರ ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಧಾರವಾಡ:
ಮಳೆ-ಚಳಿ ಎನ್ನದೆ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟ ಬೆಂಬಲಿಸಿ ಶನಿವಾರ ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈ ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿನಯ ಚಂದ್ರ, "ರಾಜ್ಯ ಸರ್ಕಾರದಿಂದ ಮಾಸಿಕ ₹15,000 ಗೌರವಧನ ನೀಡುವಂತೆ ಆಗ್ರಹಿಸಿ ಸಾವಿರಾರು ಆಶಾ ಕಾರ್ಯಕರ್ತೆಯರು ನ. 15ರಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಮೈಕೊರೆಯುವ ಚಳಿ ಹಾಗೂ ಸುರಿಯುವ ಮಳೆಯನ್ನೂ ಲೆಕ್ಕಿಸದೆ ಬೀದಿಯಲ್ಲಿ ಮಲಗಿ ನಡೆಸುತ್ತಿರುವ ಈ ತಾಯಂದಿರ ಹೋರಾಟ 12ನೇ ದಿನಕ್ಕೆ ಕಾಲಿಟ್ಟಿದೆ. ಯಾವುದೇ ಕಷ್ಟಗಳಿಗೆ ಎದೆಗುಂದದೆ ನಡೆಯುತ್ತಿರುವ ಅವರ ಈ ಸ್ಫೂರ್ತಿದಾಯಕ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಎರಡು ವರ್ಷಗಳ ಹಿಂದೆ ₹10,000 ಗೌರವಧನ ನೀಡುವುದಾಗಿ ಭರವಸೆ ನೀಡಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ, ಈಗ ಮಾತು ತಪ್ಪುವ ಮೂಲಕ ವಿಶ್ವಾಸದ್ರೋಹ ಎಸಗಿದೆ. ''''ಹೋರಾಟ ಹಿಂಪಡೆಯಿರಿ, ಸಮಸ್ಯೆ ಬಗೆಹರಿಸುತ್ತೇವೆ'''' ಎಂಬ ಮುಖ್ಯಮಂತ್ರಿಗಳ ಮೌಖಿಕ ಭರವಸೆಗಳಿಗೆ ಮಣಿಯದೆ, ಅಧಿಕೃತ ಸರ್ಕಾರಿ ಆದೇಶಕ್ಕಾಗಿ ಪಟ್ಟು ಹಿಡಿದಿರುವ ಆಶಾ ಕಾರ್ಯಕರ್ತೆಯರ ನಿಲುವು ಅತ್ಯಂತ ನ್ಯಾಯಯುತವಾಗಿದೆ " ಎಂದು ಹೇಳಿದರು.ಆಶಾ ಕಾರ್ಯಕರ್ತೆಯರ ಹೋರಾಟದಿಂದ ಸ್ಫೂರ್ತಿ ಪಡೆದು, ರಾಜ್ಯದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಧಾರೆಯೆರೆಯಲು ಮುಂದಾಗಿರುವ ಸರ್ಕಾರ ಎಡಿಬಿ ಸಾಲದ ಒಪ್ಪಂದ ಮತ್ತು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ವಿರುದ್ಧ ಬಲಿಷ್ಠ ಹೋರಾಟ ಕಟ್ಟಲು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಪ್ರೇಮಿಗಳು ಮುಂದಾಗಬೇಕೆಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಎಐಡಿಎಸ್ಒ ಜಿಲ್ಲಾಧ್ಯಕ್ಷೆ ಸಿಂಧೂ ಕೌದಿ, ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ, ಸದಸ್ಯರಾದ ಸಿದ್ದಲಿಂಗಪ್ಪ ಚಿಪ್ಪಲಕಟ್ಟಿ, ಶಾಂತೇಶ್ವರ್ ನಂದಿಕೋಲ್ಮಠ, ''''ಸಾರ್ವಜನಿಕ ಶಿಕ್ಷಣ ಉಳಿಸಿ'''' ಜಿಲ್ಲಾ ಸಮಿತಿ ಸದಸ್ಯ ಯಲ್ಲಪ್ಪ ಸಂಗ್ರೇಶಿಕೊಪ್ಪ ಸೇರಿದಂತೆ ಹಲವು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.