ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ವಿದ್ಯಾರ್ಥಿಗಳು ರಾಷ್ಟ್ರೀಯ ಸೇವೆಯ ಮೂಲಕ ಶಿಕ್ಷಣ ಹಾಗೂ ಶಿಕ್ಷಣದ ಮೂಲಕ ಸಮಾಜ ಸೇವೆಯನ್ನು ಮಾಡಬೇಕೆಂದು ಯುವಕರಿಗೆ ನಿವೃತ್ತ ಪ್ರಾಧ್ಯಾಪಕ ಪ್ರೊ. ಪ್ರಕಾಶ್ ಕರೆ ನೀಡಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿಗಳು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಎನ್‌ಎಸ್‌ಎಸ್ ನಲ್ಲಿ ತೊಡಗಿಸಿಕೊಂಡಾಗ ಸೇವೆಯ ಮಹತ್ವ ಅರಿವಾಗುತ್ತದೆ. ವಿದ್ಯಾರ್ಥಿಗಳು ಗುರಿ ತಪ್ಪಿದರೆ ಗುರಿಯನ್ನು ಬದಲಾಯಿಸಬಾರದು, ಗುರಿ ತಲುಪಲು ಬೇಕಾಗುವ ಮಾರ್ಗವನ್ನು ಬದಲಾಯಿಸಿದರೆ ತಮ್ಮ ಜೀವನದ ಗುರಿಯನ್ನು ಮುಟ್ಟಬಹುದು. ಸಮಯ ಸಂದರ್ಭಗಳನ್ನು ನೋಡಿಕೊಂಡು ಕಾರ್ಯಪ್ರವೃತ್ತವಾಗಬೇಕು. ಆಗ ಮಾತ್ರ ತಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಎಚ್.ಎಸ್ ಸ್ಮಿತಾ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ರಾಷ್ಟ್ರೀಯ ಸೇವೆ ಯೋಜನೆ ಗಾಂಧೀಜಿಯವರ ಕನಸಿನ ಕೂಸಾಗಿದೆ. ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಮನೋಭಾವ ಬೆಳೆಸುವುದು, ದೇಶಭಕ್ತಿ, ಸಹಬಾಳ್ವೆ ನಾಯಕತ್ವ ಗುಣ, ಪರಿಸರದೊಂದಿಗೆ ಹೊಂದಾಣಿಕೆ ಮುಂತಾದ ವಿಚಾರಗಳನ್ನು ಕಲಿಸಿಕೊಡುವ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು ಆರಂಭವಾಯಿತು. ಇಂದಿಗೂ ಲಕ್ಷಾಂತರ ವಿದ್ಯಾರ್ಥಿಗಳು ಎನ್‌ಎಸ್‌ಎಸ್ ಸ್ವಯಂಸೇವಕರಾಗಿ ನಾಡಿನ ಒಳಿತಿಗೆ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು. ಐಕ್ಯೂಎಸಿ ಸಂಚಾಲಕ ಡಾ. ಯೋಗೀಶ್ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೋಸ್ಕರ ಇರುವ ಯೋಜನೆ. ಕಾಯಕದ ಮಹತ್ವವನ್ನು ತಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಂಡರೆ ಬದುಕು ಸುಧಾರಿಸಿಕೊಳ್ಳಲಿದೆ. ರಾಷ್ಟ್ರವನ್ನು ಕಟ್ಟುವಲ್ಲಿ ಯುವ ಜನರು ಪಾಲುದಾರರಾಗಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಚ್.ಸಿ ಶಶಿಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಎನ್‌ಎಸ್‌ಎಸ್ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯ. ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಜೊತೆಗೆ ತಮ್ಮ ದೈಹಿಕ ಮಾನಸಿಕ ಸಾಮರ್ಥ್ಯವನ್ನು ಹೊಂದಲು ಎನ್‌ಎಸ್‌ಎಸ್ ಸಹಕಾಯಾಗಿದೆ. ಕಾಲೇಜು ದಿನಗಳಲ್ಲಿ ಎನ್‌ಎಸ್‌ಎಸ್ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಸೇರಿಕೊಳ್ಳುವುದರಿಂದ ದುರಭ್ಯಾಸಗಳಿಂದಲೂ ಸಹ ದೂರ ಉಳಿಯವಬಹುದಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಶಿಸ್ತಿನ ಜೊತೆಗೆ ತಮ್ಮ ಜೀವನದಲ್ಲಿ ಬರುವ ಸವಾಲುಳನ್ನು ಯಶಸ್ವಿಯಾಗಿ ಎದುರಿಸಿ ಮುಂದುವರೆದು ಓರ್ವ ಸಾಧಕ ಅಥವಾ ಸಾಧಕಿಯಾಗಲು ಸಾಧ್ಯವಾಗುತ್ತದೆ. ಈ ರೀತಿ ವಿದ್ಯಾರ್ಥಿಗಳು ಸಾಧನೆ ಮಾಡಿದಲ್ಲಿ ಅದರಿಂದ ಪೋಷಕರಿಗೆ ಆನಂದ ಉಂಟಾಗಿ ಅವರಲ್ಲಿ ಹೆಮ್ಮೆಯ ಭಾವನೆ ಮೂಡುತ್ತದೆ. ಆಗ ಆಗುವ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ರೀತಿ ನೀವು ಹೆತ್ತವರ ಋಣವನ್ನು ಸಹ ತೀರಿಸಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಭಾರತಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕರಾದ ಅರಿಣಿ, ತುಕಾರಾಂ, ಮೋಹನ್ ಕುಮಾರ್, ಡಾ. ಪ್ರಕಾಶ್, ಅನುಪ್ರಸಾದ್, ಕಲ್ಪನಾ, ಡಾ. ಸರಸ, ವಿನುತಾ, ಜಾಯಿದಾಬಿ, ಡಾ. ಎಲ್ ಎಂ. ವೆಂಕಟೇಶ್, ಭಾರತಿ ಮತ್ತಿತರರಿದ್ದರು.