ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ತಂತ್ರಾಂಶದಲ್ಲಿರುವ ದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದ ಬಂಜಾರಾ ಕ್ರಾಸ್ ಹತ್ತಿರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಸಂಬಂಧಪಟ್ಟ ಯಾವ ಅಧಿಕಾರಿಗಳು ಮನವಿ ಸ್ವೀಕಾರ ಮಾಡದಿರುವುದರಿಂದ ಖಾಲಿ ಕುರ್ಚಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ತಂತ್ರಾಂಶದಲ್ಲಿರುವ ದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದ ಬಂಜಾರಾ ಕ್ರಾಸ್ ಹತ್ತಿರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಸಂಬಂಧಪಟ್ಟ ಯಾವ ಅಧಿಕಾರಿಗಳು ಮನವಿ ಸ್ವೀಕಾರ ಮಾಡದಿರುವುದರಿಂದ ಖಾಲಿ ಕುರ್ಚಿಗೆ ಮನವಿ ಸಲ್ಲಿಸಿದರು.ಜಿಲ್ಲಾ ಸಂಚಾಲಕ ಮಂಜುನಾಥ ಹಳ್ಳಿ ಮಾತನಾಡಿ, ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಯು.ಯು.ಸಿ.ಎಂ.ಎಸ್ ತಂತ್ರಾಂಶದಲ್ಲಿ ಬಹಳ ದೋಷಗಳಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಪದವಿ ಕಾಲೇಜುಗಳ ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಪರೀಕ್ಷಾ ಅರ್ಜಿ ತುಂಬುತ್ತಿದ್ದಾರೆ. ವಿದ್ಯಾರ್ಥಿಗಳ ಖಾತೆಯಿಂದ ಹಣ ಪಾವತಿಯಾಗುತ್ತಿದೆ. ಆದರೆ, ಅರ್ಜಿ ಸಲ್ಲಿಕೆ ಆಗದೆ ವಿದ್ಯಾರ್ಥಿಗಳು ಚಿಂತೆಗೀಡಾಗಿದ್ದಾರೆ ಎಂದು ದೂರಿದರು.
ಈಗಾಗಲೇ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಪದವಿ ಕಾಲೇಜುಗಳ ಪರೀಕ್ಷಾ ಅರ್ಜಿ ಯು.ಯು.ಸಿ.ಎಂ.ಎಸ್ ವೆಬ್ ಸೈಟ್ ನಲ್ಲಿ ಅರ್ಜಿ ತುಂಬುವ ಪ್ರಕ್ರಿಯೆ ಶುರುವಾಗಿದೆ. ಆದರೆ, ಬಹುತೇಕ ವಿದ್ಯಾರ್ಥಿಗಳ ಖಾತೆಯಿಂದ ಹಣ ಜಮೆಯಾಗಿದೆ. ಆದರೆ ಸರಿಯಾದ ಅರ್ಜಿ ಯಶಸ್ವಿ ಆಗಿರುವ ಸಂದೇಶ ಬರುತ್ತಿಲ್ಲ. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕೇಳಿದರೆ ವಿಶ್ವವಿದ್ಯಾಲಯದಲ್ಲಿ ಕೇಳಿ ಎಂದು ಹೇಳುತ್ತಾರೆ. ವಿಜಯಪುರ, ಬಾಗಲಕೋಟೆಯಿಂದ ಬಂದ ವಿದ್ಯಾರ್ಥಿಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕೇಳಿದರೆ ಶುಲ್ಕ ಮತ್ತೊಮ್ಮೆ ಪಾವತಿಸಿ ಎಂದು ಇಲ್ಲವೇ ಯು.ಯು.ಸಿ.ಎಂ.ಎಸ್ ಬಳಿ ಹೋಗಿ ಕೇಳಿ ಎಂದು ಹೇಳುತ್ತಿದ್ದಾರೆ. ಈ ಎಲ್ಲ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಈಡಾಗಿದ್ದಾರೆ. ಆದ್ದರಿಂದ ಈ ಪರೀಕ್ಷಾ ಶುಲ್ಕ ಸೇರಿದಂತೆ ಇತರೆ ಶುಲ್ಕಗಳನ್ನು ತಮ್ಮ ಕಾಲೇಜು ಹಂತದಲ್ಲಿ ಆನ್‌ಲೈನ್ ವ್ಯವಸ್ಥೆ ರದ್ದುಗೊಳಿಸಿ ಆಫ್ ಲೈನ್ ವ್ಯವಸ್ಥೆ ಮಾಡಬೇಕು. ಇಲ್ಲವೇ ಈ ಸಮಸ್ಯೆಯನ್ನು ವಿಶ್ವವಿದ್ಯಾಲಯ ಮತ್ತು ಸರ್ಕಾರ ಕೂಡಲೇ ಪರಿಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದೆ ಹೋದಲ್ಲಿ ವಿದ್ಯಾರ್ಥಿ ಪರಿಷತ್ ರಾಜ್ಯಾದ್ಯಂತ ಹೋರಾಟಕ್ಕಿಳಿಯಲಿದೆ ಎಂದು ಎಚ್ಚರಿಸಿದರು.ಈ ಸಮಯದಲ್ಲಿ ಶಿವನಗೌಡ ಬಿರಾದಾರ, ಶ್ರೀಕಾಂತ ಬಿರಾದಾರ, ಸುಜ್ಞಾತ ಕುಲಕರ್ಣಿ, ಪ್ರವೀಣ ಬಿರಾದಾರ, ಸಂದೀಪ ಅರಳಗುಂಡಿ, ಚೇತನ ಕೊರವಾರ, ಮಹೇಶ ಗೌಡ ಮಿರ್ಜಿ, ಸುರೇಶ ಲೋನಾರ, ಆನಂದ ಪೂಜಾರಿ, ಕಾರ್ತಿಕ ಮಾಳಿ, ದುಂಡಪ್ಪ ನೆಲೋಗಿ, ರಮೇಶ ನಾಟೀಕಾರ, ಯೋಗೇಶ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.